ರಾಜಸ್ಥಾನ | ಡ್ರಮ್ ನಲ್ಲಿ ತುಂಬಿಸಿಟ್ಟ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ: ಪತ್ನಿ, ಮಕ್ಕಳು ನಾಪತ್ತೆ

PC : X-@IndiaObserverX
ಖೈರ್ತಾಲ್ ತಿಜಾರ (ರಾಜಸ್ಥಾನ): ಹರಿತವಾದ ಆಯುಧದಿಂದ ಹಲ್ಲೆಗೊಳಗಾಗಿ ಮೃತಪಟ್ಟಿರುವ ಸ್ಥಿತಿಯಲ್ಲಿದ್ದ ವ್ಯಕ್ತಿಯೊಬ್ಬರ ಮೃತದೇಹವೊಂದು ರಾಜಸ್ಥಾನದ ಖೈರ್ತಾಲ್ ತಿಜಾರ ಜಿಲ್ಲೆಯ ಮನೆಯೊಂದರ ಮೇಲ್ಚಾವಣಿಯ ಮೇಲೆ ಪತ್ತೆಯಾಗಿದೆ. ಮೃತ ವ್ಯಕ್ತಿಯ ಕುಟುಂಬದ ಸದಸ್ಯರು ನಾಪತ್ತೆಯಾಗಿದ್ದಾರೆ.
ಮೃತ ವ್ಯಕ್ತಿಯನ್ನು ಕೃಷ್ಣಗರ್ಭಾಸ್ ನ ಆದರ್ಶ್ ಕಾಲನಿಯಲ್ಲಿ ತನ್ನ ಪತ್ನಿ ಹಾಗೂ ಮೂವರು ಮಕ್ಕಳೊಂದಿಗೆ ವಾಸಿಸುತ್ತಿದ್ದ ಉತ್ತರಪ್ರದೇಶದ ಶಹರಣ್ ಪುರ್ ನಿವಾಸಿ ಹನ್ಸ್ರಾಮ್ ಅಲಿಯಾಸ್ ಸೂರಜ್ ಎಂದು ಗುರುತಿಸಲಾಗಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರಸಿಂಗ್ ಸಿರ್ವಾಣ್ ತಿಳಿಸಿದ್ದಾರೆ.
ನೆರೆಹೊರೆಯವರು ದುರ್ವಾಸನೆ ಬರುತ್ತಿದೆ ಎಂದು ದೂರು ನೀಡಿದ ನಂತರ, ಸ್ಥಳಕ್ಕೆ ಧಾವಿಸಿದ ಪೊಲೀಸರಿಗೆ ಹರಿತವಾದ ಆಯುಧದಿಂದ ಕುತ್ತಿಗೆ ಸೀಳಿದ್ದ ಸ್ಥಿತಿಯಲ್ಲಿದ್ದ ಮೃತದೇಹ ಪತ್ತೆಯಾಗಿದೆ. "ಮೃತದೇಹವು ಬೇಗ ಕೊಳೆಯಲೆಂದು ಅದರ ಮೇಲೆ ಉಪ್ಪು ಸುರಿಯಲಾಗಿತ್ತು" ಎಂದು ನಿರ್ವಾಣ್ ಹೇಳಿದ್ದಾರೆ.
ಸುಮಾರು 15 ದಿನಗಳ ಹಿಂದೆಯಷ್ಟೇ ಮೃತ ಹನ್ಸ್ರಾಮ್ ಮೇಲ್ಮಹಡಿಯ ಮನೆಗೆ ಬಾಡಿಗೆಗೆ ಬಂದಿದ್ದ ಹಾಗೂ ಇಟ್ಟಿಗೆ ಭಟ್ಟಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಶನಿವಾರದಿಂದ ಮೃತ ಹನ್ಸ್ರಾಜ್ನ ಪತ್ನಿ ಸುನೀತಾ, ಆಕೆಯ ಮೂವರು ಮಕ್ಕಳು ಹಾಗೂ ಭೂ ಮಾಲಕನ ಪುತ್ರ ಜಿತೇಂದ್ರ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ನಾಪತ್ತೆಯಾಗಿರುವವರಿಗಾಗಿ ಶೋಧ ಕಾರ್ಯಾಚರಣೆ ಕೈಗೆತ್ತಿಕೊಂಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ.







