ರಾಜಸ್ಥಾನ: SIR ನಿಯೋಜಿಸಿದ್ದ BLO ಕುಸಿದು ಬಿದ್ದು ಮೃತ್ಯು

ಸಾಂದರ್ಭಿಕ ಚಿತ್ರ | Photo Credit : PTI
ಜೈಪುರ, ಡಿ. 11: ರಾಜಸ್ಥಾನದ ಕೋಟಪುತಲಿ-ಬಹ್ರೋರ್ ನಲ್ಲಿ ಮತದರಾರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಗೆ ನಿಯೋಜಿಸಲಾಗಿದ್ದ ಬೂತ್ ಮಟ್ಟದ ಅಧಿಕಾರಿ (ಬಿಎಲ್ಒ) ಯೊಬ್ಬರು ಮನೆಗೆ ತೆರಳುತ್ತಿದ್ದಾಗ ದಾರಿ ಮಧ್ಯೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಮೃತಪಟ್ಟ ಬೂತ್ ಮಟ್ಟದ ಅಧಿಕಾರಿಯನ್ನು ವಿಜಯ್ ಗುರ್ಜರ್ (42) ಎಂದು ಗುರುತಿಸಲಾಗಿದೆ. ವಿಜಯ್ ಅವರು ಕೋಟಪುತಲಿಯ ಸರ್ದಾರ್ ಸೀನಿಯರ್ ಸೆಕೆಂಡರ್ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಅವರನ್ನು ಬಿಎಲ್ಒ ಆಗಿ ನಿಯೋಜಿಸಲಾಗಿತ್ತು.
ಅವರು ಬುಧವಾರ ಸಂಜೆ ಮನೆಗೆ ಹಿಂದಿರುಗುತ್ತಿದ್ದಾಗ ರಸ್ತೆಯಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದರು. ಅವರನ್ನು ಕುಟುಂಬ ಕೂಡಲೇ ಸರಕಾರಿ ಬಿಡಿಎಂ ಜಿಲ್ಲಾಸ್ಪತ್ರೆಗೆ ಕರೆದೊಯ್ದಿತು. ಆದರೆ, ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು.
ಘಟನೆ ಕುರಿತು ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
‘‘ವಿಜಯ್ ಕುಸಿದು ಬಿದ್ದು ಸಾವನ್ನಪ್ಪಲು ಕಾರಣ ಏನು ಎಂಬುದು ಸ್ಪಷ್ಟವಾಗಿಲ್ಲ. ವೈದ್ಯಕೀಯ ವರದಿ ಬಂದ ಬಳಿಕವಷ್ಟೇ ನಿರ್ಧರಿಸಲು ಸಾಧ್ಯ’’ ಎಂದು ಕೋಟಪುತಲಿಯ ಡಿಎಸ್ಪಿ ರಾಜೇಂದ್ರ ಕುಮಾರ್ ಹೇಳಿದ್ದಾರೆ.
‘‘ವಿಜಯ್ ಸಾರ್ ಅವರ ಎಸ್ಐಆರ್ ಕೆಲಸಗಳು ಡಿಸೆಂಬರ್ 4ರಂದು ಪೂರ್ಣಗೊಂಡಿದೆ. ಅವರ ಮೇಲೆ ಯಾವುದೇ ಒತ್ತಡ ಇರಲಿಲ್ಲ. ಅವರಿಗೆ ಯಾವುದೇ ನೋಟಿಸು ನೀಡಿರಲಿಲ್ಲ’’ ಎಂದು ಉಪ ವಿಭಾಗೀಯ ದಂಡಾಧಿಕಾರಿ (ಎಸ್ಡಿಎಂ) ರಾಮಾವತಾರ್ ಮೀನಾ ತಿಳಿಸಿದ್ದಾರೆ.







