Rajasthan: 150 ಕಿ.ಗ್ರಾಂ. ಅಮೋನಿಯಂ ನೈಟ್ರೇಟ್ ವಶ; ಇಬ್ಬರ ಬಂಧನ

Photo Credit : indiatoday.in
ಟೋಂಕ್, ಡಿ.31: ರಾಜಸ್ಥಾನದ ಟೋಂಕ್ ಪೊಲೀಸ್ಗಳ ಜಿಲ್ಲಾ ವಿಶೇಷ ತಂಡ (ಡಿಎಸ್ಟಿ) ಬುಧವಾರ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದೆ. ಅವರ ಕಾರಿನಿಂದ 150 ಕಿ.ಗ್ರಾಂ. ಅಮೋನಿಯಂ ನೈಟ್ರೇಟ್, 200 ಕಾಟ್ರಿಜ್ಗಳು ಹಾಗೂ 6 ಕಂತೆ ಸುರಕ್ಷಾ ಫ್ಯೂಸ್ ವೈರ್ನ್ನು ವಶಕ್ಕೆ ಪಡೆದುಕೊಂಡಿದೆ.
ಬಂಧಿತ ಆರೋಪಿಗಳನ್ನು ಸುರೇಂದ್ರ ಪತ್ವಾ ಹಾಗೂ ಸುರೇಂದ್ರ ಮೋಚಿ ಎಂದು ಗುರುತಿಸಲಾಗಿದೆ. ಇಬ್ಬರೂ ಬೂಂದಿ ಜಿಲ್ಲೆಯ ನಿವಾಸಿಗಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಖಚಿತ ಮಾಹಿತಿಯ ಆಧಾರದಲ್ಲಿ ಜಿಲ್ಲಾ ವಿಶೇಷ ತಂಡ ಬರೋನಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರನ್ನು ತಡೆದು ನಿಲ್ಲಿಸಿತು. ಅದರಲ್ಲಿ ಯೂರಿಯಾ ರಸಗೊಬ್ಬರದ ಗೋಣಿಗಳಲ್ಲಿ ಅಡಗಿಸಿ ಇಡಲಾಗಿದ್ದ ಸುಮಾರು 150 ಕಿ.ಗ್ರಾಂ. ಅಮೋನಿಯಂ ನೈಟ್ರೇಟ್ ವಶಪಡಿಸಿಕೊಳ್ಳಲಾಗಿದೆ ಎಂದು ಡಿಎಸ್ಪಿ ಮೃತ್ಯುಂಜಯ ಮಿಶ್ರಾ ತಿಳಿಸಿದ್ದಾರೆ.
ಆರೋಪಿಗಳು ಸ್ಫೋಟಕ ಸಾಮಗ್ರಿಗಳನ್ನು ಬೂಂದಿಯಿಂದ ಟೋಂಕ್ ಗೆ ಸಾಗಿಸುತ್ತಿದ್ದರು. ಅಮೋನಿಯಂ ನೈಟ್ರೇಟ್ ಜೊತೆಗೆ ಪೊಲೀಸರು 200 ಕಾಟ್ರಿಜ್ಗಳು ಹಾಗೂ ಸರಿಸುಮಾರು 1,100 ಮೀಟರ್ ಉದ್ದದ 6 ಕಂತೆ ಸುರಕ್ಷಾ ಫ್ಯೂಸ್ ವೈರ್ನ್ನೂ ವಶಕ್ಕೆ ಪಡೆದುಕೊಂಡಿದ್ದಾರೆ. ಈ ವಸ್ತುಗಳನ್ನು ಸಾಗಿಸಲು ಬಳಸಿದ ಕಾರನ್ನೂ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು.
ನಿರ್ದಿಷ್ಟ ಗುಪ್ತಚರ ಮಾಹಿತಿ ಸ್ವೀಕರಿಸಿದ ಬಳಿಕ ಕಾರ್ಯಾಚರಣೆ ನಡೆಸಲಾಗಿದೆ. ವಶಪಡಿಸಿಕೊಂಡ ಸ್ಫೋಟಕ ವಸ್ತುವಿನ ಮೂಲ, ಉದ್ದೇಶಿತ ಬಳಕೆ ಹಾಗೂ ಸಂಭಾವ್ಯ ಸಂಪರ್ಕಗಳನ್ನು ಪತ್ತೆಹಚ್ಚಲು ತನಿಖೆ ನಡೆಯುತ್ತಿದೆ ಎಂದು ಮಿಶ್ರಾ ತಿಳಿಸಿದ್ದಾರೆ.
ಆರೋಪಿಗಳನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ಸಾಮಗ್ರಿಗಳನ್ನು ಗಣಿಗಾರಿಕೆ ಸೇರಿದಂತೆ ಅಕ್ರಮ ಚಟುವಟಿಕೆಗಳ ಉದ್ದೇಶಕ್ಕಾಗಿ ಸಾಗಿಸಲಾಗುತ್ತಿತ್ತೇ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.







