ರಾಜಸ್ಥಾನ : ಕೆಮ್ಮಿನ ಔಷಧ ಸೇವಿಸಿ 5 ವರ್ಷದ ಬಾಲಕ ಮೃತ್ಯು

(Photo | Pexels)
ಜೈಪುರ, ಸೆ. 30: ರಾಜಸ್ಥಾನ ಸರಕಾರದ ಉಚಿತ ಯೋಜನೆ ಅಡಿಯಲ್ಲಿ ಪೂರೈಸಲಾದ ಕೆಮ್ಮಿನ ಔಷಧ ಸೇವಿಸಿ ಐದು ವರ್ಷದ ಬಾಲಕ ಮೃತಪಟ್ಟ ಘಟನೆ ಸಿಕಾರ್ ಜಿಲ್ಲೆಯ ಖೋರಿ ಬ್ರಾಹ್ಮನನ್ ಗ್ರಾಮದಲ್ಲಿ ನಡೆದಿದೆ.
ಮೃತಪಟ್ಟ ಬಾಲಕನನ್ನು ಮುಖೇಶ್ ಶರ್ಮಾ ಎಂಬವರ ಪುತ್ರ ನಿತೀಶ್ ಎಂದು ಗುರುತಿಸಲಾಗಿದೆ.
ನಿತೀಶ್ ಕಳೆದ ಕೆಲವು ದಿನಗಳಿಂದ ಶೀತ ಹಾಗೂ ಕೆಮ್ಮಿನಿಂದ ಬಳಲುತ್ತಿದ್ದ. ಈ ಹಿನ್ನೆಲೆಯಲ್ಲಿ ಆತನ ತಾಯಿ ಆತನನ್ನು ಚಿರಾನಾದ ಸಿಎಚ್ಸಿಯಲ್ಲಿ ದೊರೆಯುವ ಉಚಿತ ಔಷಧ ಪಡೆಯಲು ಕರೆದುಕೊಂಡು ಹೋಗಿದ್ದರು. ಕೆಮ್ಮಿನ ಔಷಧ ಸೇವಿಸಿದ ಬಳಿಕ ನಿತೀಶ್ನ ಆರೋಗ್ಯ ಹದಗೆಟ್ಟಿದೆ. ಅನಂತರ ಆತ ಸ್ಥಳೀಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಈ ಕೆಮ್ಮಿನ ಔಷಧ ಕುಡಿದವರಲ್ಲಿ ಸಮಸ್ಯೆ ಸೃಷ್ಟಿಯಾಗುವುದು ಇದೇ ಮೊದಲಲ್ಲ. ಕೆಲವು ದಿನಗಳ ಹಿಂದೆ ಅಜಿತ್ಗಢ ಪ್ರದೇಶದ ಇಬ್ಬರು ಮಕ್ಕಳು ಇದೇ ಕೆಮ್ಮಿನ ಔಷಧ ಸೇವಿಸಿದ ಬಳಿಕ ಅಸ್ವಸ್ಥರಾಗಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ.
ನಿತೀಶ್ಗೆ ರವಿವಾರ ಸಂಜೆ ಚಿರಾನಾದ ಸಿಎಚ್ಸಿಯಿಂದ ಕೆಮ್ಮಿನ ಔಷಧ ನೀಡಲಾಗಿತ್ತು. ಆತನ ಆರೋಗ್ಯ ರಾತ್ರಿ ಹದಗೆಟ್ಟಿತು. ಸೋಮವಾರ ಬೆಳಗ್ಗೆ ಆಸ್ಪತ್ರೆಗೆ ಕೊಂಡೊಯ್ದಾಗ ಆತ ಅಲ್ಲಿ ಮೃತಪಟ್ಟ ಎಂದು ಎಎಸ್ಐ ರೋಹಿತಾಸ್ ಕುಮಾರ್ ಜಂಗಿಡ್ ತಿಳಿಸಿದ್ದಾರೆ.





