ರಾಜಸ್ಥಾನ : ಸೂರ್ಯ ನಮಸ್ಕಾರ ಕಡ್ಡಾಯದ ಹಿನ್ನೆಲೆಯಲ್ಲಿ ಭುಗಿಲೆದ್ದ ವಿವಾದ

ಸಾಂದರ್ಭಿಕ ಚಿತ್ರ |Photo: NDTV
ಜೈಪುರ: ರಾಜಸ್ಥಾನದಲ್ಲಿ ಎಲ್ಲ ಸರಕಾರಿ ಶಾಲೆಗಳಲ್ಲಿಯ ವಿದ್ಯಾರ್ಥಿಗಳಿಗೆ ಸೂರ್ಯ ನಮಸ್ಕಾರವನ್ನು ಕಡ್ಡಾಯಗೊಳಿಸಿರುವ ಸರಕಾರದ ನಿರ್ಧಾರದ ಕುರಿತು ಭಾರೀ ವಿವಾದ ಸೃಷ್ಟಿಯಾಗಿದೆ. ಹಲವಾರು ಮುಸ್ಲಿಮ್ ಸಂಸ್ಥೆಗಳು ಈ ಕ್ರಮವನ್ನು ಪ್ರತಿಭಟಿಸಿವೆ. ಸೂರ್ಯ ನಮಸ್ಕಾರ ಮಾಡುವಂತೆ ತಮ್ಮ ಮಕ್ಕಳನ್ನು ಬಲವಂತಗೊಳಿಸುವ ಸರಕಾರದ ಆದೇಶವನ್ನು ರದ್ದುಗೊಳಿಸುವಂತೆ ಕೋರಿ ಜಮೀಯತ್ ಉಲೇಮಾ ಹಿಂದ್ ಸೇರಿದಂತೆ ಮುಸ್ಲಿಮ್ ಸಂಘಟನೆಗಳು ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿವೆ.
ರಾಜಸ್ಥಾನದ ಶಾಲೆಗಳಲ್ಲಿ ಫೆ.15ರಿಂದ ಸೂರ್ಯ ನಮಸ್ಕಾರವನ್ನು ಕಡ್ಡಾಯಗೊಳಿಸಿರುವ ಭಜನ್ ಲಾಲ್ ಶರ್ಮಾ ನೇತೃತ್ವದ ಸರಕಾರವು, ಆದೇಶವನ್ನು ಪಾಲಿಸದಿದ್ದಲ್ಲಿ ಕಾನೂನು ಕ್ರಮಗಳ ಎಚ್ಚರಿಕೆಯನ್ನು ನೀಡಿದೆ.
ಸರಕಾರದ ನಿರ್ಧಾರಕ್ಕೆ ಮುಸ್ಲಿಮ್ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಸೋಮವಾರ ಜೈಪುರದಲ್ಲಿ ಸಮಾವೇಶಗೊಂಡ ಜಮೀಯತ್ ಉಲೇಮಾ ಹಿಂದ್ ನ ರಾಜ್ಯ ಕಾರ್ಯಕಾರಣಿಯು ಸೂರ್ಯ ನಮಸ್ಕಾರ ಕಾರ್ಯಕ್ರಮವನ್ನು ಬಹಿಷ್ಕರಿಸುವಂತೆ ಮುಸ್ಲಿಮ್ ಸಮುದಾಯವನ್ನು ಆಗ್ರಹಿಸಿದೆ.
ಸೂರ್ಯ ನಮಸ್ಕಾರವು ಮಂತ್ರಗಳ ಪಠಣದೊಂದಿಗೆ ಸೂರ್ಯನನ್ನು ಆರಾಧಿಸುವ ಹಲವಾರು ಯೋಗಭಂಗಿಗಳನ್ನು ಒಳಗೊಂಡಿದೆ. ಸೂರ್ಯ ನಮಸ್ಕಾರವನ್ನು ಮಾಡುವುದರಿಂದ ಸೂರ್ಯನನ್ನು ದೇವರು ಎಂದು ಒಪ್ಪಿಕೊಂಡಂತಾಗುತ್ತದೆ ಮತ್ತು ತಮ್ಮ ಧರ್ಮವು ಇದನ್ನು ಅನುಮತಿಸುವುದಿಲ್ಲ ಎಂದು ಮುಸ್ಲಿಮ್ ಸಂಘಟನೆಗಳು ವಾದಿಸಿವೆ.
ರಾಜ್ಯದಲ್ಲಿಯ ನೂತನ ಬಿಜೆಪಿ ಸರಕಾರವು ಫೆ.15, ಸೂರ್ಯ ಸಪ್ತಮಿಯಂದು ಆಯೋಜಿಸಿರುವ ಬೃಹತ್ ಸೂರ್ಯನಮಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ಮುಸ್ಲಿಮ್ ಸಂಸ್ಥೆಗಳು ತಮ್ಮ ಸಮುದಾಯದ ವಿದ್ಯಾರ್ಥಿಗಳಿಗೆ ಸೂಚಿಸಿವೆ.







