ರಾಜಸ್ಥಾನ | ದಲಿತ ಯುವಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಮೈಮೇಲೆ ಮೂತ್ರ ವಿಸರ್ಜನೆ ಮಾಡಿದ ದುಷ್ಕರ್ಮಿಗಳು

ಸಾಂದರ್ಭಿಕ ಚಿತ್ರ
ಜೈಪುರ : ರಾಜಸ್ಥಾನದ ಸಿಕಾರ್ ಜಿಲ್ಲೆಯಲ್ಲಿ 19ರ ಹರೆಯದ ದಲಿತ ಯುವಕನನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೆ, ಮೈಮೇಲೆ ಮೂತ್ರ ವಿಸರ್ಜನೆ ಮಾಡಿ ಜಾತಿ ನಿಂದನೆಗೈದಿರುವ ಆರೋಪ ಕೇಳಿ ಬಂದಿದೆ.
ಎಪ್ರಿಲ್ 8ರಂದು ಘಟನೆ ನಡೆದಿದೆ. ಆರೋಪಿಗಳು ಕೃತ್ಯದ ವೀಡಿಯೊ ಚಿತ್ರೀಕರಿಸಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಘಟನೆ ಬಗ್ಗೆ ಸಂತ್ರಸ್ತ ಯುವಕನ ಪೋಷಕರು ಎಪ್ರಿಲ್ 16ರಂದು ಪ್ರಕರಣ ದಾಖಲಿಸಿದ್ದಾರೆ.
ʼಎಪ್ರಿಲ್ 8ರಂದು ಮದುವೆ ಮೆರವಣಿಗೆಯನ್ನು ವೀಕ್ಷಿಸಲು ತೆರಳಿದ್ದ ನನ್ನನ್ನು ದುಷ್ಕರ್ಮಿಗಳು ಬಸ್ ನಿಲ್ದಾಣಕ್ಕೆಂದು ಸುಳ್ಳು ಹೇಳಿ ಗ್ರಾಮದ ಹೊರಗೆ ಕರೆದುಕೊಂಡು ಹೋಗಿ ಜಾತಿ ನಿಂದನೆ ಮಾಡಿದರು. ಬಳಿಕ ಲೈಂಗಿಕ ದೌರ್ಜನ್ಯ ಎಸಗಿ ನನ್ನ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾರೆ. ಘಟನೆಯ ದೃಶ್ಯವನ್ನು ಚಿತ್ರೀಕರಿಸಿದ್ದಾರೆ. ಓರ್ವ ದುಷ್ಕರ್ಮಿ ನನ್ನ ಬೆನ್ನು, ತೋಳುಗಳು, ಹೊಟ್ಟೆ ಮತ್ತು ಜನನಾಂಗಗಳಿಗೆ ಕೋಲಿನಿಂದ ಹಲ್ಲೆ ನಡೆಸಿದ್ದಾನೆ. ಈ ವೇಳೆ ಸ್ಥಳೀಯರಿಬ್ಬರು ಮಧ್ಯಪ್ರವೇಶಿಸಿ ನನ್ನನ್ನು ರಕ್ಷಿಸಿದ್ದಾರೆʼ ಎಂದು ಸಂತ್ರಸ್ತ ಯುವಕ ಹೇಳಿದ್ದಾನೆ.
ಫತೇಪುರ್ ಉಪ ಪೊಲೀಸ್ ವರಿಷ್ಠಾಧಿಕಾರಿ ಅರವಿಂದ್ ಕುಮಾರ್ ಜಾಟ್ ಈ ಕುರಿತು ಪ್ರತಿಕ್ರಿಯಿಸಿ, ಆರೋಪಿಗಳ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆ ಸೇರಿದಂತೆ ವಿವಿಧ ಸೆಕ್ಷನ್ಗಳಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಕುರಿತು ತನಿಖೆ ನಡೆಯುತ್ತಿದೆ. ವಿಧಿವಿಜ್ಞಾನ ಮತ್ತು ವೈದ್ಯಕೀಯ ಪರೀಕ್ಷೆಯ ವರದಿ ಬಂದ ಬಳಿಕ ಮುಂದಿನ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.





