ಹಲ್ದಿಘಾಟಿ ಬಳಿಯ ಐತಿಹಾಸಿಕ ಶಾಸನವನ್ನು ಬದಲಿಸಿದೆ: ವಿವಾದ ಸೃಷ್ಟಿಸಿದ ರಾಜಸ್ಥಾನ ಉಪ ಮುಖ್ಯಮಂತ್ರಿ ದಿಯಾ ಕುಮಾರಿ ಹೇಳಿಕೆ

ದಿಯಾ ಕುಮಾರಿ | PTI
ಜೈಪುರ: ಹಲ್ದಿಘಾಟಿ ಬಳಿಯ ಐತಿಹಾಸಿಕ ಶಾಸನವನ್ನು ನಾನು ಸಂಸದೆಯಾಗಿದ್ದಾಗ ಬದಲಿಸಿದೆ ಎಂದು ಹೇಳಿಕೆ ನೀಡುವ ಮೂಲಕ, ರಾಜಸ್ಥಾನ ಉಪ ಮುಖ್ಯಮಂತ್ರಿ ದಿಯಾ ಕುಮಾರಿ ವಿವಾದ ಸೃಷ್ಟಿಸಿದ್ದಾರೆ. 1576ರಲ್ಲಿ ಮುಘಲ್ ಸೇನಾಪಡೆಗಳೆದುರು ನಡೆದಿದ್ದ ಯುದ್ಧದಲ್ಲಿ ಮಹಾರಾಣಾ ಪ್ರತಾಪ್ ಪರಾಭವಗೊಂಡಿದ್ದರು ಎಂದು ಮೂಲತಃ ಈ ಶಾಸನದಲ್ಲಿ ಉಲ್ಲೇಖಿಸಲಾಗಿದೆ.
ಜೈಪುರದಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ದಿಯಾ ಕುಮಾರಿ, “ನಾನು 2021ರಲ್ಲಿ ಸಂಸದೆಯಾಗಿದ್ದಾಗ, ಹಲ್ದಿಘಾಟ್ ಶಾಸನವನ್ನು ಬದಲಿಸಲಾಗಿದ್ದು, ಈಗ ಅದರಲ್ಲಿ ಮಹಾರಾಣಾ ಪ್ರತಾಪ್ ವಿಜಯಿಯಾಗಿದ್ದರು ಎಂದು ಬದಲಿಸಲಾಗಿದೆ” ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
“ಹಲ್ದಿಘಾಟ್ ಶಾಸನದ ಮೇಲೆ ವಾಸ್ತವವಾಗಿ ಮಹಾರಾಣಾ ಪ್ರತಾಪ್ ಪರಾಭವಗೊಂಡಿದ್ದರು ಎಂದು ಕೆತ್ತಲಾಗಿತ್ತು. 2021ರಲ್ಲಿ ನಾನು ಸಂಸದೆಯಾಗಿದ್ದಾಗ, ನಾವು ಅದನ್ನು ಬದಲಿಸಿದೆವು. ಈಗ ನೀವೇನಾದರೂ ಹಲ್ದಿಘಾಟ್ ಗೆ ಭೇಟಿ ನೀಡಿದರೆ, ಆ ಶಾಸನದ ಮೇಲೆ ಮಹಾರಾಣಾ ಪ್ರತಾಪ್ ವಿಜಯಿಯಾಗಿದ್ದರು ಎಂದು ಬರೆದಿರುವುದನ್ನು ನೋಡಬಹುದಾಗಿದೆ. ನನ್ನ ಸಂಸತ್ ಸದಸ್ಯತ್ವದ ಅವಧಿಯಲ್ಲಿ ಇದು ನನ್ನ ಬಹು ದೊಡ್ಡ ಸಾಧನೆಯಾಗಿದೆ” ಎಂದು ಅವರು ಘೋಷಿಸಿದ್ದಾರೆ.
ಈ ಹೇಳಿಕೆಯ ಬಗ್ಗೆ ಹಲವಾರು ಇತಿಹಾಸಕಾರರು ಹಾಗೂ ವಿದ್ವಾಂಸರು ಗಂಭೀರ ಕಳವಳ ವ್ಯಕ್ತಪಡಿಸಿದ್ದು, ರಾಜಕೀಯ ಲಾಭಕ್ಕಾಗಿ ಐತಿಹಾಸಿಕ ಸತ್ಯಗಳನ್ನು ಪುನರ್ ರಚಿಸುವ ಪ್ರಯತ್ನ ಇದಾಗಿದೆ ಎಂದು ಆರೋಪಿಸಿದ್ದಾರೆ.
ಒಂದನೇ ಮಾನ್ ಸಿಂಗ್ ನೇತೃತ್ವದ ಮುಘಲ್ ಸೇನೆ ಹಾಗೂ ಮಹಾರಾಣಾ ಪ್ರತಾಪ್ ನಡುವೆ ನಡೆದಿದ್ದ ಹಲ್ದಿಘಾಟ್ ಯುದ್ಧದಲ್ಲಿ ಮಹಾರಾಣಾ ಪ್ರತಾಪ್ ನಿರ್ಣಾಯಕವಲ್ಲದ ಅಥವಾ ವ್ಯೂಹಾತ್ಮಕ ಸೋಲು ಅನುಭವಿಸಿದರೂ, ಆ ಸೋಲಿನ ನಂತರವೂ, ಅವರು ಮುಘಲ್ ಸಾಮ್ರಾಜ್ಯದ ವಿರುದ್ಧ ತಮ್ಮ ಪ್ರತಿರೋಧವನ್ನು ಮುಂದುವರಿಸಿದ್ದರು ಎಂದು ಇತಿಹಾಸಕಾರರು ವ್ಯಾಪಕವಾಗಿ ದಾಖಲಿಸಿದ್ದಾರೆ.
ಆದರೆ, ದಿಯಾ ಕುಮಾರಿ ಅವರು ಅಧಿಕೃತ ಶಾಸನವನ್ನು ಬದಲಿಸುವ ಮೂಲಕ ಪ್ರಾದೇಶಿಕ ಅಸ್ಮಿತೆಯನ್ನು ಮಾತ್ರ ವೈಭವೀಕರಿಸುತ್ತಿಲ್ಲ; ಬದಲಿಗೆ, ಶೈಕ್ಷಣಿಕ ಸಮಗ್ರತೆ ಹಾಗೂ ಐತಿಹಾಸಿಕ ಸತ್ಯಗಳಿಗೆ ಧಕ್ಕೆ ತರುತ್ತಿದ್ದಾರೆ. ಇಂತಹ ಮಧ್ಯಪ್ರವೇಶಗಳು ಸಾರ್ವಜನಿಕರು ಭೂತಕಾಲವನ್ನು ಅರ್ಥ ಮಾಡಿಕೊಳ್ಳುವುದರಿಂದ ವಿಮುಖಗೊಳಿಸುವ ಅಪಾಯವಿದ್ದು, ರಾಜಕೀಯ ನಿರೂಪಣೆಗೆ ತಕ್ಕಂತೆ ಐತಿಹಾಸಿಕ ದಾಖಲೆಗಳನ್ನು ತಿರುಚಬಹುದಾದ ಅಪಾಯಕಾರಿ ಪೂರ್ವನಿದರ್ಶನವಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಭಾರತದಾದ್ಯಂತ ಐತಿಹಾಸಿಕ ವ್ಯಕ್ತಿಗಳನ್ನು ಪಠ್ಯಪುಸ್ತಕಗಳು, ವಸ್ತು ಸಂಗ್ರಹಾಲಯಗಳು ಹಾಗೂ ಸಾರ್ವಜನಿಕ ಸ್ಮಾರಕಗಳಲ್ಲಿ ಹೇಗೆ ಬಿಂಬಿಸಲಾಗುತ್ತಿದೆ ಎಂಬ ಕುರಿತು ಸಮಗ್ರ ಪರಿಶೀಲನೆ ಹೆಚ್ಚಳಗೊಂಡಿರುವ ಹೊತ್ತಿನಲ್ಲೇ ಈ ಸಂಗತಿ ಬಹಿರಂಗವಾಗಿದೆ.
ಉಪ ಮುಖ್ಯಮಂತ್ರಿ ದಿಯಾ ಕುಮಾರಿ ಹೇಳಿಕೆಯ ಬಗ್ಗೆ ಚರ್ಚೆಗಳು ಸ್ಫೋಟಗೊಂಡಿದ್ದು, ವಿಶೇಷವಾಗಿ, ಶಿಕ್ಷಣ ತಜ್ಞರು ಹಾಗೂ ಸಾಮಾಜಿಕ ಮಾಧ್ಯಮ ಬಳಕೆದಾರರು, ಬಿಜೆಪಿ ನೇತೃತ್ವದ ಸರಕಾರ ಸಾರ್ವಜನಿಕರ ನೆನಪನ್ನು ಮರು ರೂಪಿಸಲು ಸಾಂಸ್ಕೃತಿಕ ರಾಷ್ಟ್ರೀಯತೆಯನ್ನು ಬಳಸುತ್ತಿದೆ ಎಂದು ಆರೋಪಿಸಿದ್ದಾರೆ.
ಆದರೆ, ಈ ಶಾಸನ ಬದಲಾವಣೆಗೆ ಸಂಬಂಧಿಸಿದಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದಾಗಲಿ ಅಥವಾ ಇನ್ನಾವುದೇ ಕೇಂದ್ರೀಯ ಪಾರಂಪರಿಕ ಸಂಸ್ಥೆಯಿಂದಾಗಲಿ ಯಾವುದೇ ಅಧಿಕೃತ ಪ್ರತಿಕ್ರಿಯೆ ಹೊರ ಬಿದ್ದಿಲ್ಲ.







