ಕೆಮ್ಮು ಸಿರಪ್ ಸೇವಿಸಿ ಮಕ್ಕಳು ಮೃತಪಟ್ಟ ಹಿನ್ನೆಲೆ: ಡ್ರಗ್ ಕಂಟ್ರೋಲರನ್ನು ಅಮಾನತುಗೊಳಿಸಿದ ರಾಜಸ್ಥಾನ ಸರಕಾರ

ಸಾಂದರ್ಭಿಕ ಚಿತ್ರ
ಜೈಪುರ: ದೋಷಪೂರಿತ ಕೆಮ್ಮು ಸಿರಪ್ ಸೇವಿಸಿ ಮಕ್ಕಳು ಮೃತಪಟ್ಟ ಹಿನ್ನೆಲೆಯಲ್ಲಿ, ರಾಜಸ್ಥಾನ ಸರ್ಕಾರವು ರಾಜ್ಯ ಔಷಧ ನಿಯಂತ್ರಕರನ್ನು ಅಮಾನತುಗೊಳಿಸಿದ್ದು, ಜೈಪುರ ಮೂಲದ ಕೇಸನ್ಸ್ ಫಾರ್ಮಾ ಕಂಪೆನಿಯು ತಯಾರಿಸಿದ ಎಲ್ಲಾ ಔಷಧಿಗಳ ವಿತರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
ವೈದ್ಯಕೀಯ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳ ಪ್ರಕಾರ, ಮುಂದಿನ ಆದೇಶದವರೆಗೆ ಕೇಸನ್ಸ್ ಫಾರ್ಮಾ ತಯಾರಿಸಿದ 19 ಔಷಧಿಗಳ ಪೂರೈಕೆಯನ್ನು ನಿಲ್ಲಿಸಲಾಗಿದೆ. ಜೊತೆಗೆ, ಡೆಕ್ಸ್ಟ್ರೋಮೆಥೋರ್ಫಾನ್ ಅಂಶವನ್ನು ಒಳಗೊಂಡಿರುವ ಇತರ ಎಲ್ಲಾ ಕೆಮ್ಮು ಸಿರಪ್ ಗಳ ವಿತರಣೆಯನ್ನೂ ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.
ಔಷಧಗಳ ಗುಣಮಟ್ಟ ಪರಿಶೀಲನೆ ಪ್ರಕ್ರಿಯೆಯಲ್ಲಿ ಅಕ್ರಮ ಪ್ರಭಾವ ಬೀರಿದ ಆರೋಪದ ಹಿನ್ನೆಲೆಯಲ್ಲಿ ರಾಜ್ಯ ಔಷಧ ನಿಯಂತ್ರಕ ರಾಜಾರಾಮ್ ಶರ್ಮಾ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.
ಮಧ್ಯಪ್ರದೇಶದಲ್ಲಿ ಒಂಭತ್ತು ಮತ್ತು ರಾಜಸ್ಥಾನದಲ್ಲಿ ಇಬ್ಬರು ಮಕ್ಕಳ ಸಾವಿನ ಘಟನೆಗಳ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ದೋಷಪೂರಿತ ಕೆಮ್ಮಿನ ಸಿರಪ್ ಸೇವನೆಯೇ ಈ ಸಾವುಗಳಿಗೆ ಕಾರಣವಾಗಿದೆ ಎಂಬ ಶಂಕೆಯ ಹಿನ್ನೆಲೆಯಲ್ಲಿ ತನಿಖೆ ಪ್ರಾರಂಭವಾಗಿದೆ.
ರಾಜ್ಯದ ಮುಖ್ಯಮಂತ್ರಿ ಭಜನ್ಲಾಲ್ ಶರ್ಮಾ ಅವರು ಘಟನೆಯ ಕುರಿತು ಸಂಪೂರ್ಣ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಿ, ಹೊಣೆಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅವರ ನಿರ್ದೇಶನದಂತೆ ತಜ್ಞರ ಸಮಿತಿಯನ್ನು ರಚಿಸಿ, ಪ್ರಕರಣದ ಪ್ರತಿಯೊಂದು ಅಂಶವನ್ನು ವಿಶ್ಲೇಷಿಸಲು ಆದೇಶಿಸಲಾಗಿದೆ.
ಆರೋಗ್ಯ ಸಚಿವ ಗಜೇಂದ್ರ ಸಿಂಗ್ ಅವರು ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡುವ ಉದ್ದೇಶದಿಂದ ತನಿಖಾ ಪ್ರಕ್ರಿಯೆ ಮತ್ತು ತ್ವರಿತ ಕ್ರಮಗಳನ್ನು ಆರಂಭಿಸಲಾಗಿದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವೈದ್ಯಕೀಯ ಮತ್ತು ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗಾಯತ್ರಿ ರಾಥೋಡ್ ಅವರು 2021ರಲ್ಲಿ ಕೇಂದ್ರ ಸರ್ಕಾರವು ನಾಲ್ಕು ವರ್ಷದೊಳಗಿನ ಮಕ್ಕಳಿಗೆ ಡೆಕ್ಸ್ಟ್ರೋಮೆಥೋರ್ಫಾನ್ ನೀಡಬಾರದೆಂದು ಸಲಹೆ ನೀಡಿತ್ತು ಎಂದು ಹೇಳಿದ್ದಾರೆ. ಈ ಸಲಹೆಯನ್ನು ರಾಜ್ಯ ಸರ್ಕಾರವು ಈಗ ಮತ್ತೆ ಪುನರುಚ್ಚರಿಸಿದೆ. ಭಾರತದ ಔಷಧ ನಿಯಂತ್ರಕ ಜನರಲ್ ಕಚೇರಿಯು ಇದೀಗ ಐದು ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಮಾತ್ರ ಈ ಸಿರಪ್ ನೀಡಬೇಕು ಮತ್ತು ಎರಡು ವರ್ಷದೊಳಗಿನ ಮಕ್ಕಳಿಗೆ ಯಾವುದೇ ಸಂದರ್ಭದಲ್ಲೂ ನೀಡಬಾರದು ಎಂದು ಸೂಚನೆ ನೀಡಿದೆ.
ಮಕ್ಕಳು ಮತ್ತು ಗರ್ಭಿಣಿಯರಿಗೆ ಅಪಾಯಕಾರಿ ಎಂದು ಪರಿಗಣಿಸಲ್ಪಟ್ಟ ಔಷಧಿಗಳ ಪ್ಯಾಕೇಜಿಂಗ್ನಲ್ಲಿ ಮುಂದಿನ ದಿನಗಳಲ್ಲಿ ಸ್ಪಷ್ಟ ಎಚ್ಚರಿಕೆ ಲೇಬಲ್ಗಳು ಇರಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2012 ರಿಂದ ಕೇಸನ್ಸ್ ಫಾರ್ಮಾ ಕಂಪೆನಿಯು ಪೂರೈಸಿದ 10,000 ಕ್ಕೂ ಹೆಚ್ಚು ಔಷಧ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಅವುಗಳಲ್ಲಿ 42 ಮಾದರಿಗಳು ಗುಣಮಟ್ಟದ ಮಾನದಂಡಗಳನ್ನು ಪೂರೈಸಲು ವಿಫಲವಾಗಿವೆ ಎಂದು ರಾಜಸ್ಥಾನ ವೈದ್ಯಕೀಯ ಸೇವೆಗಳ ನಿಗಮ ಲಿಮಿಟೆಡ್ (RMSCL) ನ ವ್ಯವಸ್ಥಾಪಕ ನಿರ್ದೇಶಕ ಪುಖ್ರಾಜ್ ಸೇನ್ ಹೇಳಿದ್ದಾರೆ.
“ಸಾರ್ವಜನಿಕ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಮುನ್ನೆಚ್ಚರಿಕೆಯ ಕ್ರಮವಾಗಿ ಕೇಸನ್ಸ್ ಫಾರ್ಮಾ ತಯಾರಿಸುವ ಎಲ್ಲಾ ಔಷಧಿಗಳ ಪೂರೈಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ,” ಎಂದು ಅವರು ಸ್ಪಷ್ಟಪಡಿಸಿದರು.







