ಮದುವೆಯಾಗುವ ವಯಸ್ಸಾಗದಿದ್ದರೂ ವಯಸ್ಕರು ಸಹಜೀವನ ನಡೆಸಬಹುದು: ರಾಜಸ್ಥಾನ ಹೈಕೋರ್ಟ್

ರಾಜಸ್ಥಾನ ಹೈಕೋರ್ಟ್ | Photo Credit : Facebook/@RajasthanHC
ಜೈಪುರ, ಡಿ. 5: ಕಾನೂನು ಪ್ರಕಾರ ಮದುವೆಯಾಗುವ ವಯಸ್ಸು ಆಗದಿದ್ದರೂ, ಇಬ್ಬರು ವಯಸ್ಕರು ಸಹಮತದಿಂದ ಸಹಜೀವನ ನಡೆಸುವ ಹಕ್ಕು ಹೊಂದಿದ್ದಾರೆ ಎಂದು ರಾಜಸ್ಥಾನ ಹೈಕೋರ್ಟ್ ಹೇಳಿದರು. ಅವರಿಗೆ ಮದುವೆಯಾಗುವ ವಯಸ್ಸು ಆಗಿಲ್ಲ ಎಂಬ ಕಾರಣಕ್ಕಾಗಿ ಅವರ ಸಾಂವಿಧಾನಿಕ ಹಕ್ಕುಗಳನ್ನು ನಿರಾಕರಿಸುವಂತಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ರಕ್ಷಣೆ ನೀಡಬೇಕೆಂದು ಕೋರಿ 18 ವರ್ಷದ ಯುವತಿ ಮತ್ತು 19 ವರ್ಷದ ಯುವಕ ಸಲ್ಲಿಸಿರುವ ಅರ್ಜಿಯೊಂದರ ವಿಚಾರಣೆ ನಡೆಸಿದ ನ್ಯಾಯಾಧೀಶ ಅನೂಪ್ ದಂಡ್ ಈ ತೀರ್ಪು ನೀಡಿದರು.
ತಾವು ತಮ್ಮ ಸ್ವಂತ ಇಚ್ಛೆಯಿಂದ ಸಹಜೀವನ ನಡೆಸುತ್ತಿದ್ದೇವೆ ಎಂದು ನ್ಯಾಯಾಲಯಕ್ಕೆ ತಿಳಿಸಿದ ಜೋಡಿಯು ಅಕ್ಟೋಬರ್ 27ರಂದು ತಾವು ಸಹಜೀವನ ಒಪ್ಪಂದ ಮಾಡಿಕೊಂಡಿದ್ದೇವೆ ಎಂದಿತು.
ಯುವತಿಯ ಕುಟುಂಬವು ಈ ಸಂಬಂಧವನ್ನು ವಿರೋಧಿಸಿದ್ದು, ತಮ್ಮನ್ನು ಕೊಲ್ಲುವ ಬೆದರಿಕೆ ಹಾಕಿದೆ ಎಂದು ಅರ್ಜಿದಾರರು ಆರೋಪಿಸಿದರು. ಈ ಬಗ್ಗೆ ತಾವು ಕೊಟ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ, ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಹೇಳಿದರು.
ಅರ್ಜಿಯನ್ನು ವಿರೋಧಿಸಿದ ಸರಕಾರಿ ವಕೀಲ ವಿವೇಕ್ ಚೌಧರಿ, ಯುವಕನಿಗೆ ಕಾನೂನು ಪ್ರಕಾರ ಮದುವೆಯಾಗಬಹುದಾದ 21 ವರ್ಷ ಆಗಿಲ್ಲದಿರುವುದರಿಂದ ಅವರಿಗೆ ಸಹಜೀವನ ನಡೆಸಲು ಅವಕಾಶ ನೀಡಬಾರದು ಎಂದು ವಾದಿಸಿದರು.
ಈ ವಾದವನ್ನು ತಿರಸ್ಕರಿಸಿದ ನ್ಯಾಯಾಲಯ, ಅರ್ಜಿದಾರರು ಮದುವೆಯಾಗುವ ವಯಸ್ಸಿನವರು ಅಲ್ಲ ಎಂಬ ಏಕೈಕ ಕಾರಣಕ್ಕಾಗಿ ಸಂವಿಧಾನದ 21ನೇ ವಿಧಿಯಡಿಯಲ್ಲಿ ಬರುವ ಜೀವಿಸುವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕನ್ನು ಅವರಿಗೆ ನಿರಾಕರಿಸಲು ಸಾಧ್ಯವಿಲ್ಲ ಎಂದು ಹೇಳಿತು.
ಅವರಿಗೆ ರಕ್ಷಣೆ ನೀಡಲು ಕ್ರಮ ತೆಗೆದುಕೊಳ್ಳುವಂತೆ ನ್ಯಾಯಾಧೀಶರು ಪೊಲೀಸರಿಗೆ ನಿರ್ದೇಶನ ನೀಡಿದರು.







