ರಾಜಸ್ಥಾನ : ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯ ಮೇಲೆ ನರ್ಸಿಂಗ್ ಸಹಾಯಕನಿಂದ ಅತ್ಯಾಚಾರ

ಸಾಂದರ್ಭಿಕ ಚಿತ್ರ
ಜೈಪುರ: ರಾಜಸ್ಥಾನದ ಆಲ್ವಾರ್ ಜಿಲ್ಲೆಯ ಖಾಸಗಿ ಆಸ್ಪತ್ರೆಯೊಂದರ ತೀವ್ರ ನಿಗಾ ಘಟಕ (ಐಸಿಯು)ದಲ್ಲಿ ದಾಖಲಾಗಿದ್ದ 24 ಹರೆಯದ ಮಹಿಳೆಯ ಮೇಲೆ ನರ್ಸಿಂಗ್ ಸಹಾಯಕನೋರ್ವ ಅತ್ಯಾಚಾರವೆಸಗಿರುವ ಘಟನೆ ಮಂಗಳವಾರ ನಡೆದಿದೆ.
ಶ್ವಾಸಕೋಶ ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಐಸಿಯುದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಆರೋಪಿ ಚಿರಾಗ್ ಯಾದವ್ ಎಂಬಾತನನ್ನು ಪೋಲಿಸರು ಬಂಧಿಸಿದ್ದಾರೆ.
ನಸುಕಿನ ನಾಲ್ಕು ಗಂಟೆಯ ಸುಮಾರಿಗೆ ಈ ಘಟನೆ ನಡೆದಿದೆ. ತಾನು ಬೊಬ್ಬೆ ಹೊಡೆದಾಗ ಆರೋಪಿ ತನಗೆ ಚುಚ್ಚುಮದ್ದೊಂದನ್ನು ನೀಡಿದ್ದು, ಬಳಿಕ ತಾನು ಪ್ರಜ್ಞೆಯನ್ನು ಕಳೆದುಕೊಂಡಿದ್ದೆ. ತನ್ನ ಪತಿ ತನ್ನ ಮೊಬೈಲ್ ಫೋನ್ ಗೆ ಕರೆ ಮಾಡಿದಾಗ ತನಗೆ ಪ್ರಜ್ಞೆ ಮರುಕಳಿಸಿತ್ತು. ಬಳಿಕ ತಾನು ಅನುಭವಿಸಿದ್ದ ಸಂಕಷ್ಟದ ಬಗ್ಗೆ ಕುಟುಂಬಕ್ಕೆ ಮಾಹಿತಿ ನೀಡಿದ್ದೆ ಎಂದು ಸಂತ್ರಸ್ತ ಮಹಿಳೆ ತಿಳಿಸಿದ್ದಾಳೆ.
ಆರೋಪಿ ಯಾದವ್ ಮಹಿಳೆಯ ಹಾಸಿಗೆಯತ್ತ ತೆರಳಿದ್ದು ಮತ್ತು ಅದನ್ನು ಪರದೆಗಳಿಂದ ಮುಚ್ಚಿದ್ದನ್ನು ಸಿಸಿಟಿವಿ ದೃಶ್ಯಾವಳಿಯು ತೋರಿಸಿದೆ.
ಈ ಬಗ್ಗೆ ಎಫ್ಐಆರ್ ದಾಖಲಿಸಿಕೊಂಡಿರುವ ಪೋಲಿಸರು ತನಿಖೆಯನ್ನು ಮುಂದುವರಿಸಿದ್ದಾರೆ.





