ರಾಜಸ್ಥಾನ ವಿಧಾನಸಭೆ | ಕಾಂಗ್ರೆಸ್-ಬಿಜೆಪಿ ಜಿದ್ದಾಜಿದ್ದಿ: ಇತಿಹಾಸ ಪುನರಾವರ್ತನೆಯಾಗಲಿದೆಯೇ?

ಅಶೋಕ್ ಗೆಹ್ಲೋಟ್ (source: PTI)
ಹೊಸದಿಲ್ಲಿ, ಡಿ.3: ರಾಜಸ್ಥಾನ ವಿಧಾನಸಭಾ ಚುನಾವಣೆಯ ಫಲಿತಾಂಶ ಕುತೂಹಲ ಮೂಡಿಸಿದ್ದು, ಬಹುತೇಕ ಮತಗಟ್ಟೆ ನಿರ್ಗಮನ ಸಮೀಕ್ಷೆಗಳು ಬಿಜೆಪಿ ಗೆಲುವನ್ನು ಅಂದಾಜಿಸಿವೆ. ಇಲ್ಲಿ ಅಧಿಕಾರಾರೂಢ ಪಕ್ಷ ಅಧಿಕಾರ ಕಳೆದುಕೊಳ್ಳುವ ಪರಿಪಾಠ ಸುಮಾರು ಮೂರು ದಶಕಗಳಿಂದ ಬೆಳೆದುಬಂದಿದ್ದು, ಈ ಬಾರಿಯೂ ತುರುಸಿನ ಸ್ಪರ್ಧೆಯಲ್ಲಿ ಇದು ಪುನರಾವರ್ತನೆಯಾಲಿದೆಯೇ ಎಂಬ ಕುತೂಹಲ ಮೂಡಿಸಿದೆ.
ನೇರ ಸ್ಪರ್ಧೆ ಇರುವ ರಾಜಸ್ಥಾನದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಹೀಗೆ ಉಭಯ ಪಕ್ಷಗಳು ವ್ಯಾಪಕ ಪ್ರಚಾರ ನಡೆಸಿದ್ದವು. ಬಿಜೆಪಿ ಚುನಾವಣಾ ಉಸ್ತುವಾರಿಗಾಗಿ ಹಿರಿಯ ಕೇಂದ್ರ ಸಚಿವರನ್ನು ನಿಯೋಜಿಸಿದ್ದು, ಪ್ರಧಾನಿ ನರೇಂದ್ರ ಮೋದಿಯವರನ್ನು ಮುಂದಿಟ್ಟು ಪ್ರಚಾರ ನಡೆಸಿದೆ. ಕಾಂಗ್ರೆಸ್ ಪಕ್ಷ ತಳಹಂತದ ಪ್ರಚಾರಕ್ಕೆ ಒತ್ತು ನೀಡಿದ್ದು, ಕೇಂದ್ರ ನಾಯಕರು ನಿಯಮಿತವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.
ಚುನಾವಣಾ ಸಮೀಕ್ಷೆಗಳ ಪ್ರಕಾರ, ಸತತ ಎರಡನೇ ಬಾರಿ ಅಧಿಕಾರ ಉಳಿಸಿಕೊಳ್ಳುವ ಗೆಹ್ಲೋಟ್ ಕನಸು ನನಸಾಗುವ ಸಾಧ್ಯತೆ ಕಡಿಮೆ. ಒಂಭತ್ತು ಮತಗಟ್ಟೆ ಸಮೀಕ್ಷೆಗಳ ಪೈಕಿ ಎಂಟು ಬಿಜೆಪಿಗೆ ಸುಲಭ ಜಯವನ್ನು ಅಂದಾಜಿಸಿದ್ದು, ಬಿಜೆಪಿ ಸರಾಸರಿ 104 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಇದೆ ಎಂದು ಹೇಳಿವೆ. ಕಾಂಗ್ರೆಸ್ ಗಳಿಕೆ 86 ಸ್ಥಾನಗಳು ಎಂದು ನಿರೀಕ್ಷಿಸಲಾಗಿದೆ.
2018ರಲ್ಲಿ ಕೂಡಾ ಅಧಿಕಾರದಲ್ಲಿದ್ದ ಬಿಜೆಪಿ, ಕಾಂಗ್ರೆಸ್ಗೆ ನಿಟಕ ಸ್ಪರ್ಧೆ ಒಡ್ಡಿತ್ತು ಹಾಗೂ ಬಹುಮತಕ್ಕೆ ಒಂದು ಸ್ಥಾನದ ಕೊರತೆ ಇತ್ತು. ಈ ಬಾರಿ ಬಿಜೆಪಿಗೆ ಅವಕಾಶ ಹೆಚ್ಚಿದೆ ಎಂದು ಅಂದಾಜಿಸಲಾಗಿದೆ.







