ರಾಜಸ್ಥಾನ: ಅತ್ತ ಕಾರಣಕ್ಕೆ ಒಂದು ವರ್ಷದ ಮಲಮಗಳಿಗೆ ಥಳಿಸಿ ಹತ್ಯೆ

ಕೋಟಾ: ಮಗು ಅಳುತ್ತಿದೆ ಎಂಬ ಕಾರಣಕ್ಕೆ ಒಂದು ವರ್ಷದ ಮಲಮಗಳನ್ನು ವ್ಯಕ್ತಿಯೊಬ್ಬ ಥಳಿಸಿ ಹತ್ಯೆ ಮಾಡಿದ ದಾರುಣ ಪ್ರಕರಣ ರಾಜಸ್ಥಾನದ ಬೆಳಕಿಗೆ ಬಂದಿದೆ.
ಸೋಮವಾರ ರಾತ್ರಿ ಈ ಘಟನೆ ನಡೆದಿದ್ದು, ಮಂಗಳವಾರ ಬೆಳಿಗ್ಗೆ ಆರೋಪಿ ಪಲಾಯನ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಮಗು ಅತ್ತ ಕಾರಣದಿಂದ ತನ್ನ ನಿದ್ದೆಗೆ ಭಂಗ ಬಂದಿದೆ ಎಂದು ಕೋಪಗೊಂಡ ವ್ಯಕ್ತಿ ಈ ಕೃತ್ಯ ಎಸಗಿದ್ದಾನೆ.
ಮಗು ಮಂಗಳವಾರ ಬೆಳಿಗ್ಗೆ ಏಳದೇ ಇದ್ದಾಗ, ತಾಯಿ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾಳೆ. ಆ ವೇಳೆಗಾಗಲೇ ಮಗು ಮೃತಪಟ್ಟಿದ್ದನ್ನು ವೈದ್ಯರು ಪ್ರಕಟಿಸಿದರು.
ಮಗುವಿನ ತಾಯಿ ತನ್ನ ಮೊದಲ ಪತಿಯನ್ನು ತೊರೆದು ಆರೋಪಿ ಜಿತ್ತು ಎಂಬ ದಿನಕೂಲಿ ಕಾರ್ಮಿಕನ ಜತೆ ನಗರದಲ್ಲಿ ವಾಸವಿದ್ದಳು. ಪುಟ್ಟ ಮಗು ಅಳುತ್ತಿದ್ದ ಕಾರಣದಿಂದ ಪದೇ ಪದೇ ಜಿತ್ತು ನಿದ್ದೆಗೆಡಬೇಕಾಗುತ್ತಿತ್ತು. ಕೋಪಗೊಂಡ ಆತ ಮಗುವನ್ನು ಅಮಾನುಷವಾಗಿ ಥಳಿಸಿದ್ದು, ಮಗುವಿನ ತುಟಿ, ಕೆನ್ನೆ ಮತ್ತು ಪಾದದಲ್ಲಿ ಬಾಸುಂಡೆಗಳು ಕಾಣಿಸುತ್ತಿದ್ದವು ಎಂದು ಪೊಲೀಸರು ಹೇಳಿದ್ದಾರೆ.
ಸೋಮವಾರ ತಡರಾತ್ರಿ ಮಗುವನ್ನು ಥಳಿಸಿ ಗಂಟಲು ಹಿಸುಕಿ ಹತ್ಯೆ ಮಾಡಲಾಗಿದೆ ಎಂದು ತಾಯಿ ದೂರಿನಲ್ಲಿ ಹೇಳಿದ್ದಾಗಿ ಉದಯ ನಗರ ಸರ್ಕಲ್ ಇನ್ಸ್ಪೆಕ್ಟರ್ ಜಿತೇಂದ್ರ ಸಿಂಗ್ ವಿವರಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯ ಪತ್ತೆಗೆ ಪ್ರಯತ್ನ ಮುಂದುವರಿಸಿದ್ದಾರೆ.







