ಕೇರಳ ಪ್ರವಾಹದಲ್ಲಿ ಅನೇಕರು ಮೃತರಾಗಿದ್ದಾರೆ ಎಂದು ಹೇಳಿ ಟೀಕೆಗಳಿಗೆ ಗುರಿಯಾದ ರಾಜೀವ್ ಚಂದ್ರಶೇಖರ್

ರಾಜೀವ್ ಚಂದ್ರಶೇಖರ್ | PC : PTI
ಹೊಸದಿಲ್ಲಿ : ಕೇರಳದಲ್ಲಿ ‘ಪ್ರವಾಹ’ದಿಂದಾಗಿ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ ಎಂಬ ಹೇಳಿಕೆಗಾಗಿ ಕೇಂದ್ರ ಸಚಿವ ಹಾಗೂ ತಿರುವನಂತಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜೀವ್ ಚಂದ್ರಶೇಖರ್ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಟೀಕೆಗಳಿಗೆ ಗುರಿಯಾಗಿದ್ದಾರೆ.
‘ಕೇರಳದಲ್ಲಿ ಪ್ರವಾಹದಿಂದಾಗಿ ಪ್ರಾಣಹಾನಿಯ ಬಗ್ಗೆ ಕೇಳಿ ದುಃಖವಾಗಿದೆ. ಸಂತ್ರಸ್ತ ಕುಟುಂಬಗಳಿಗೆ ನನ್ನ ಸಂತಾಪಗಳು. ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ ’ಎಂದು ಚಂದ್ರಶೇಖರ್ ಗುರುವಾರ ಫೇಸ್ಬುಕ್ ಪೋಸ್ಟ್ನಲ್ಲಿ ಹೇಳಿದ್ದರು.
ವಿವಿಧ ವಲಯಗಳಿಂದ ಟೀಕೆಗಳಿಗೆ ಗುರಿಯಾದ ಬಳಿಕ ಅವರು ತನ್ನ ಪೋಸ್ಟ್ನ್ನು ಅಳಿಸಿದ್ದಾರೆ.
2018ರಲ್ಲಿ ರಾಜ್ಯದಲ್ಲಿ ಉಂಟಾಗಿದ್ದ ಭಾರೀ ಪ್ರವಾಹವನ್ನು ಆಧರಿಸಿದ್ದ ‘2018‘ಚಿತ್ರವನ್ನು ಚಂದ್ರಶೇಖರ್ ಈಗಷ್ಟೇ ವೀಕ್ಷಿಸಿರಬಹುದು ಎಂದು ತನ್ನ ಪೋಸ್ಟ್ನಲ್ಲಿ ಅಣಕಿಸಿರುವ ರಾಜ್ಯದ ಸಚಿವ ವಿ.ಶಿವನ್ ಕುಟ್ಟಿ, ಚುನಾವಣೆಗಳನ್ನು ಹೊರತುಪಡಿಸಿ ಆಗಾಗ್ಗೆ ರಾಜ್ಯಕ್ಕೆ ಬರುತ್ತಿದ್ದರೆ ತನ್ನ ಪ್ರಜ್ಞೆಯನ್ನು ಸಂಪೂರ್ಣವಾಗಿ ಕಳೆದುಕೊಳ್ಳುವುದರಿಂದ ಅವರು ಪಾರಾಗಬಹುದು ಎಂದು ಕುಟುಕಿದ್ದಾರೆ.
ಕೇರಳದಲ್ಲಿ ಭಾರೀ ಮಳೆಯಾಗುತ್ತಿದ್ದರೂ ಎಲ್ಲಿಯೂ ಪ್ರವಾಹದಂತಹ ಸ್ಥಿತಿ ವರದಿಯಾಗಿಲ್ಲ ಎಂದು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಬೆಟ್ಟು ಮಾಡಿದ್ದಾರೆ.
ರಾಜ್ಯದಲ್ಲಿ ಈವರೆಗೆ ಮಳೆ ಸಂಬಂಧಿತ ಘಟನೆಗಳಲ್ಲಿ ನಾಲ್ವರು ಮೃತಪಟ್ಟಿದ್ದಾರೆ.







