Madhya Pradesh | ಇಂದೋರ್ ದುರಂತ ಭ್ರಷ್ಟ ವ್ಯವಸ್ಥೆಯ ಸೃಷ್ಟಿ: ಜಲಸಂರಕ್ಷಣಾ ತಜ್ಞ ರಾಜೇಂದ್ರ ಸಿಂಗ್

ರಾಜೇಂದ್ರ ಸಿಂಗ್ |Photo Credit : @watermanofindia
ಹೊಸದಿಲ್ಲಿ, ಜ. 4: ಮಧ್ಯಪ್ರದೇಶದ ಇಂದೋರ್ ನಲ್ಲಿ ಕಲುಷಿತ ನೀರಿನ ಸೇವನೆಯಿಂದಾಗಿ ಹಲವರು ಸಾವನ್ನಪ್ಪಿದ ಘಟನೆಯು ‘‘ವ್ಯವಸ್ಥೆ ಸೃಷ್ಟಿಸಿದ ವಿಪತ್ತಾಗಿದೆ’’ ಮತ್ತು ಭ್ರಷ್ಟಾಚಾರವೇ ಈ ದುರಂತದ ಮೂಲವೆಂದು ಖ್ಯಾತ ಜಲಸಂರಕ್ಷಣಾ ತಜ್ಞ ರಾಜೇಂದ್ರ ಸಿಂಗ್ ರವಿವಾರ ಹೇಳಿದ್ದಾರೆ.
ರೇಮನ್ ಮ್ಯಾಗ್ಸೆಸೆ ಪ್ರಶಸ್ತಿ ವಿಜೇತರಾದ ರಾಜೇಂದ್ರ ಸಿಂಗ್ ಅವರನ್ನು ‘ಭಾರತದ ಜಲಮಾನವ’ ಎಂದು ವ್ಯಾಪಕವಾಗಿ ಪ್ರಶಂಸಿಸಲಾಗಿದೆ. ಭಾರತದ ಅತ್ಯಂತ ಸ್ವಚ್ಛ ನಗರವೆನಿಸಿರುವ ಇಂದೋರ್ ನಲ್ಲಿಯೇ ಈ ದುರ್ಘಟನೆ ಸಂಭವಿಸಬಹುದಾದರೆ, ಇತರ ಪ್ರದೇಶಗಳ ಪರಿಸ್ಥಿತಿ ಹೇಗಿರಬಹುದು ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
‘‘ಇಂದೋರ್ ನ ಕಲುಷಿತ ಕುಡಿಯುವ ನೀರಿನಿಂದ ಸಂಭವಿಸಿದ ದುರಂತವು ವ್ಯವಸ್ಥೆಯು ಸೃಷ್ಟಿಸಿದ ವಿಪತ್ತಾಗಿದೆ. ಗುತ್ತಿಗೆದಾರರು ಹಣ ಉಳಿತಾಯ ಮಾಡಲು ಒಳಚರಂಡಿ ಮಾರ್ಗಗಳ ಪಕ್ಕದಲ್ಲೇ ಕುಡಿಯುವ ನೀರಿನ ಪೈಪ್ಲೈನ್ಗಳನ್ನು ಇಡುತ್ತಾರೆ. ಭ್ರಷ್ಟಾಚಾರವು ಇಡೀ ವ್ಯವಸ್ಥೆಯನ್ನು ಹಾಳುಗೆಡವಿದೆ. ಇಂದೋರ್ ದುರಂತವು ಭ್ರಷ್ಟ ವ್ಯವಸ್ಥೆಯ ಫಲಶ್ರುತಿಯಾಗಿದೆ’’ ಎಂದು ರಾಜೇಂದ್ರ ಸಿಂಗ್ ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಇಂದೋರ್ ನ ಭಗೀರಥಪುರದಲ್ಲಿ ಕಲುಷಿತ ಕುಡಿಯುವ ನೀರಿನ ಸೇವನೆಯಿಂದ ಉಂಟಾದ ವಾಂತಿಭೇದಿಯಿಂದ ಕನಿಷ್ಠ 14 ಮಂದಿ ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆಗೆ ಸಂಬಂಧಿಸಿ ಅಧಿಕಾರಿಗಳು ವ್ಯತ್ಯಾಸವಾದ ಅಂಕಿ ಸಂಖ್ಯೆಗಳು ನೀಡಿದ್ದಾರೆ. ಇಂದೋರ್ ನಗರದ ಮೇಯರ್ 8 ಮಂದಿ ಮೃತಪಟ್ಟಿದ್ದಾರೆಂದು ದೃಢಪಡಿಸಿದ್ದರೆ, ಆರೋಗ್ಯ ಇಲಾಖೆ ಆರು ಮಂದಿ ಸಾವನ್ನಪ್ಪಿದ್ದಾರೆಂದು ತಿಳಿಸಿದೆ.
ಭಗೀರಥಪುರ ಪ್ರದೇಶದಲ್ಲಿ ಪೊಲೀಸ್ ಹೊರಠಾಣೆ ಸಮೀಪವಿರುವ ಶೌಚಾಲಯದ ಬಳಿ ಕುಡಿಯುವ ನೀರು ಪೂರೈಸುವ ಪೈಪ್ಲೈನ್ ಒಡೆದಿರುವುದೇ ನೀರು ಕಲುಷಿತಗೊಳ್ಳಲು ಕಾರಣವೆಂದು ಅಧಿಕಾರಿಗಳು ತಿಳಿಸಿದ್ದಾರೆ.







