ಲೋಕಸಭೆ ಚುನಾವಣೆಗೆ INDIA ಮೈತ್ರಿ ಪಕ್ಷಗಳು ಮತ್ತೆ ಒಂದಾಗಲಿದೆ: ಕಾಂಗ್ರೆಸ್ ನಾಯಕ ರಾಜೀವ್ ಶುಕ್ಲಾ

ರಾಜೀವ್ ಶುಕ್ಲಾ | PC : X
ಹೊಸದಿಲ್ಲಿ: INDIA ಮೈತ್ರಿಕೂಟವು ಒಗ್ಗಟ್ಟಾಗಿದೆ ಮತ್ತು ಮುಂಬರುವ ಲೋಕಸಭಾ ಚುನಾವಣೆಗೆ ಮತ್ತೆ ಜೊತೆಯಾಗಿ ಕಾರ್ಯತಂತ್ರ ರೂಪಿಸಲಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಮತ್ತು ರಾಜ್ಯಸಭಾ ಸಂಸದ ರಾಜೀವ್ ಶುಕ್ಲಾ ಪುನರುಚ್ಚರಿಸಿದ್ದಾರೆ.
INDIA ಮೈತ್ರಿಕೂಟ ರಚನೆಯಾದಾಗ, ಲೋಕಸಭೆ ಚುನಾವಣೆಯಲ್ಲಿ ಜೊತೆಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದೆವು, ಅದೇ ರೀತಿ ರಾಜ್ಯಗಳಿಗೆ ಸಂಬಂಧಿಸಿದ ಸ್ಥಳೀಯ ಚುನಾವಣೆಯಲ್ಲಿ ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಳ್ಳಲು ರಾಜ್ಯ ಘಟಕಗಳಿಗೆ ಅವಕಾಶ ನೀಡುವ ಬಗ್ಗೆ ನಿರ್ಧರಿಸಿದ್ದೆವು. ಲೋಕಸಭೆ ಚುನಾವಣೆಗೆ ಮೈತ್ರಿಯು ಮುಂದುವರಿಯಲಿದೆ. ನಾವು ಪಕ್ಷಗಳ ಮುಂದಿನ ಕಾರ್ಯತಂತ್ರವನ್ನು ನಿರ್ಣಯಿಸಬೇಕಾಗಿದೆ ಎಂದು ಹೇಳಿದ್ದಾರೆ.
ದಿಲ್ಲಿ ಚುನಾವಣೆಯಲ್ಲಿ ಆಪ್ ಪಕ್ಷದ ಸೋಲಿನ ಕುರಿತು ಕಾಂಗ್ರೆಸ್ ಸಂಸದೆ ರೇಣುಕಾ ಚೌಧರಿ ಪ್ರತಿಕ್ರಿಯಿಸಿ ಆಪ್ ಪಕ್ಷವನ್ನು ಟೀಕಿಸಿದ್ದರು. ಅವರು ತಮ್ಮ ಅಹಂನಿಂದಾಗಿ ಚುನಾವಣೆಯಲ್ಲಿ ಸೋತಿದ್ದಾರೆ. ಕಾಂಗ್ರೆಸ್ ತನ್ನ ಅಸ್ತಿತ್ವವನ್ನು ಬಲಪಡಿಸಲು ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆ, ಯಾವುದೇ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡಿಲ್ಲ. ದೇಶದ ಹಿತಾಸಕ್ತಿಗಾಗಿ ಮೈತ್ರಿ ಉಳಿಯಬೇಕು. ನಾವು ಅವರನ್ನು ಗೌರವಿಸುತ್ತೇವೆ ಮತ್ತು ಅವರನ್ನು ನಂಬುತ್ತೇವೆ. ಒಗ್ಗಟ್ಟು ದೇಶದ ಸಂವಿಧಾನದ ರಕ್ಷಣೆಗಿರುವ ಏಕೈಕ ಮಾರ್ಗವಾಗಿದೆ ಎಂದು ಹೇಳಿದ್ದರು.







