ರಾಜೀವ್ ಯುವ ಮಿತ್ರ ಯೋಜನೆ ಸ್ಥಗಿತ : ಬಿಜೆಪಿ ಸರ್ಕಾರದ ನಡೆಯ ವಿರುದ್ಧ ಪ್ರತಿಭಟನೆ
ಉದ್ಯೋಗ ಕಳೆದುಕೊಂಡ 40,000ಕ್ಕೂ ಹೆಚ್ಚಿನ ಯುವಕರು

Photo:X (Twitter)/@KamleshJakharIt
ಜೈಪುರ: ರಾಜಸ್ಥಾನದಲ್ಲಿನ ಬಿಜೆಪಿ ನೇತೃತ್ವದ ನೂತನ ರಾಜ್ಯ ಸರ್ಕಾರವು ಹಲವಾರು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದ್ದು, ಈ ಪೈಕಿ ಈ ಹಿಂದಿನ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ರಾಜೀವ್ ಗಾಂಧಿ ಯುವ ಮಿತ್ರ ಯೋಜನೆಯನ್ನು ಸ್ಥಗಿತಗೊಳಿಸುವುದೂ ಸೇರಿದೆ. ಇದರ ಬೆನ್ನಿಗೇ ರಾಜ್ಯ ಸರ್ಕಾರದ ನಡೆಯ ವಿರುದ್ಧ ರಾಜಸ್ಥಾನ ಯುವಕರು ಆಕ್ರೋಶ ವ್ಯಕ್ತಪಡಿಸಿದ್ದು, ಪ್ರತಿಭಟನೆಗಿಳಿದಿದ್ದಾರೆ ಎಂದು thewire.in ವರದಿ ಮಾಡಿದೆ.
ಗುರುವಾರ ನಡೆದಿದ್ದ ಪ್ರಥಮ ಸಚಿವ ಸಂಪುಟ ಸಭೆಯಲ್ಲಿ ರಾಜೀವ್ ಗಾಂಧಿ ಯುವ ಮಿತ್ರ ಗೌರವ ಧನ ಯೋಜನೆಯನ್ನು ಸ್ಥಗಿತಗೊಳಿಸುವ ನಿರ್ಧಾರವನ್ನು ಭಜನ್ ಲಾಲ್ ಶರ್ಮ ನೇತೃತ್ವದ ನೂತನ ಬಿಜೆಪಿ ಸರ್ಕಾರ ಕೈಗೊಂಡಿತ್ತು. ಇದರಿಂದ ಈಗಾಗಲೇ ಈ ಯೋಜನೆಯ ಫಲಾನುಭವಿಗಳಾಗಿರುವ 40,000ಕ್ಕೂ ಹೆಚ್ಚು ಮಂದಿ ಯುವಕರು ತಮ್ಮ ಮಾಸಿಕ ಆದಾಯವನ್ನು ಕಳೆದುಕೊಂಡಿದ್ದರು.
2021-22ನೇ ಸಾಲಿನ ಬಜೆಟ್ ಭಾಷಣದಲ್ಲಿ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ರಾಜೀವ್ ಗಾಂಧಿ ಯುವ ಮಿತ್ರ ಯೋಜನೆಯನ್ನು ಪ್ರಕಟಿಸಿದಾಗ ವಿರೋಧ ಪಕ್ಷದಲ್ಲಿದ್ದ ಬಿಜೆಪಿಯು ಈ ಯೋಜನೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಕಾಂಗ್ರೆಸ್ ಪಕ್ಷವು ತನ್ನ ಸಿದ್ಧಾಂತಗಳನ್ನು ಪ್ರಚಾರ ಮಾಡಲು ಯುವ ಮಿತ್ರರನ್ನು ಬಳಸಿಕೊಳ್ಳುತ್ತಿದೆ ಎಂದು ಅದು ಆರೋಪಿಸಿತ್ತು. ಇದರ ಬೆನ್ನಿಗೇ ಅಧಿಕಾರಕ್ಕೆ ಬಂದ ಕೂಡಲೇ ರಾಜೀವ್ ಗಾಂಧಿ ಯುವ ಮಿತ್ರ ಯೋಜನೆಯನ್ನು ಸ್ಥಗಿತಗೊಳಿಸುವ ನಿರ್ಧಾರವನ್ನು ಬಿಜೆಪಿ ಸರ್ಕಾರ ಪ್ರಕಟಿಸಿದೆ.
ಬಿಜೆಪಿ ಸರ್ಕಾರದ ಈ ನಿರ್ಧಾರದ ವಿರುದ್ಧ ರಾಜಸ್ಥಾನ ಯುವಕರು ಬೀದಿಗಿಳಿದಿದ್ದು, “ರಾಜೀವ್ ಗಾಂಧಿ ಮಿತ್ರ ಗೌರವ ಧನ ಯೋಜನೆ’ಯನ್ವಯ ನಾವು ರಾಜ್ಯ ಮತ್ತು ಕೇಂದ್ರ ಸರ್ಕಾರದ ಹಲವು ಯೋಜನೆಗಳನ್ನು ಪ್ರಚಾರ ಮಾಡಬೇಕಿತ್ತು. ಅದಕ್ಕೆ ಪ್ರತಿಯಾಗಿ ನಮಗೆ ಪ್ರತಿ ತಿಂಗಳೂ ಸುಮಾರು ರೂ. 17,500 ಗೌರವ ಧನವನ್ನು ಪಾವತಿಸಲಾಗುತ್ತಿತ್ತು. ಈ ಯೋಜನೆಯು ದಿಢೀರನೇ ಸ್ಥಗಿತಗೊಂಡಿರುವುದರಿಂದ ಸುಮಾರು 4,200 ಯುವಕರು ನಿರುದ್ಯೋಗಿಗಳಾಗಿದ್ದಾರೆ. ನಾವು ಇದಕ್ಕೂ ಮುನ್ನ ಈ ಮೊತ್ತವನ್ನು ನಮ್ಮ ಕುಟುಂಬವನ್ನು ನಡೆಸಲು ಬಳಸುತ್ತಿದ್ದೆವು. ನಾವು ಸುಮಾರು ಒಂದು ತಿಂಗಳಿನಿಂದ ಸರ್ಕಾರಕ್ಕೆ ಮನವಿ ಮಾಡುತ್ತಿದ್ದರೂ ಯಾವುದೇ ಸಕಾರಾತ್ಮಕ ಫಲಿತಾಂಶ ಬಂದಿಲ್ಲ. ಸರ್ಕಾರವು ನಮ್ಮನ್ನು ಗುತ್ತಿಗೆ ಆಧಾರದ ನೌಕರರನ್ನಾಗಿ ನೇಮಕ ಮಾಡಿಕೊಳ್ಳಬೇಕು” ಎಂದು ಪ್ರತಿಭಟನೆಯಲ್ಲಿ ಭಾಗವಹಿಸಿರುವ 25 ವರ್ಷದ ದಿಲೀಪ್ ಸಪೇರ ಎಂಬ ಯುವಕ ಆಗ್ರಹಿಸಿದ್ದಾನೆ.
ಶುಕ್ರವಾರ, ಜೈಪುರದಲ್ಲಿ ಯುವ ಮಿತ್ರರನ್ನು ಭೇಟಿಯಾಗಿ, ಅವರಿಗೆ ಬೆಂಬಲ ಸೂಚಿಸಿದ ಕಾಂಗ್ರೆಸ್ ನಾಯಕ ಹಾಗೂ ರಾಜಸ್ಥಾನದ ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್, ಸರ್ಕಾರವು ಸದರಿ ಯೋಜನೆಯನ್ನು ಮರು ಜಾರಿಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.







