‘‘ಆಪರೇಶನ್ ಸಿಂಧೂರ’’ ಕಾರ್ಯಾಚರಣೆಯಲ್ಲಿ ಕನಿಷ್ಠ 100 ಉಗ್ರರು ಹತ : ಸರ್ವಪಕ್ಷ ಸಭೆಗೆ ರಾಜ್ನಾಥ್ ಸಿಂಗ್ ಮಾಹಿತಿ

ಮಲ್ಲಿಕಾರ್ಜುನ ಖರ್ಗೆ, ರಾಜ್ನಾಥ್ ಸಿಂಗ್ | PTI
ಹೊಸದಿಲ್ಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತ ಬುಧವಾರ ನಡೆಸಿರುವ ‘‘ಆಪರೇಶನ್ ಸಿಂಧೂರ’’ ಕಾರ್ಯಾಚರಣೆಯಲ್ಲಿ ಕನಿಷ್ಠ 100 ಭಯೋತ್ಪಾದಕರು ಹತರಾಗಿದ್ದಾರೆ ಎಂದು ರಕ್ಷಣಾ ಸಚಿವ ರಾಜ್ನಾಥ್ ಸಿಂಗ್ ಗುರುವಾರ ರಾಜಕೀಯ ಪಕ್ಷಗಳ ನಾಯಕರಿಗೆ ತಿಳಿಸಿದ್ದಾರೆ.
ಭಯೋತ್ಪಾದಕ ನಿಗ್ರಹ ಕಾರ್ಯಾಚರಣೆಯ ಬಗ್ಗೆ ಮಾಹಿತಿ ನೀಡಲು ಸಂಸತ್ನಲ್ಲಿ ಏರ್ಪಡಿಸಲಾದ ಸರ್ವಪಕ್ಷ ಸಭೆಗೆ ಅವರು ಈ ಮಾಹಿತಿ ನೀಡಿದ್ದಾರೆ. ಕಾರ್ಯಾಚರಣೆಯು ಈಗಲೂ ನಡೆಯುತ್ತಿದ್ದು, ಅದರ ವಿವರಗಳನ್ನು ಈ ಕ್ಷಣದಲ್ಲಿ ನೀಡಲು ಸಾಧ್ಯವಿಲ್ಲ ಎಂದು ರಾಜ್ನಾಥ್ ಸಿಂಗ್ ಹೇಳಿದರು.
ಅದೇ ವೇಳೆ, ಪರಿಸ್ಥಿತಿಯನ್ನು ಬಿಗಡಾಯಿಸಲು ಭಾರತ ಬಯಸುವುದಿಲ್ಲ ಎಂಬುದಾಗಿಯೂ ರಾಜ್ನಾಥ್ ಸಿಂಗ್ ಹೇಳಿದ್ದಾರೆ. ಆದರೆ, ಪಾಕಿಸ್ತಾನ ಏನಾದರೂ ಮಾಡಿದರೆ ಭಾರತವು ಸುಮ್ಮನಿರುವುದಿಲ್ಲ ಎಂಬ ಎಚ್ಚರಿಕೆಯನ್ನು ಅವರು ನೀಡಿದ್ದಾರೆ.
ಎಲ್ಲಾ ರಾಜಕೀಯ ಪಕ್ಷಗಳು ಸರಕಾರಕ್ಕೆ ಬೆಂಬಲ ಘೋಷಿಸಿವೆ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.
‘‘ಅವರು (ರಾಜ್ನಾಥ್ ಸಿಂಗ್) ಕಾರ್ಯಾಚರಣೆಯ ಬಗ್ಗೆ ಮತ್ತು ಸರಕಾರದ ಉದ್ದೇಶದ ಬಗ್ಗೆ ನಾಯಕರಿಗೆ ಮಾಹಿತಿ ನೀಡಿದರು. ಇತರ ನಾಯಕರೂ ಮಾತನಾಡಿ ಅವರ ಸಲಹೆಗಳನ್ನು ನೀಡಿದರು ಮತ್ತು ಪ್ರಬುದ್ಧತೆ ತೋರಿಸಿದರು. ದೇಶ ಎದುರಿಸುತ್ತಿರುವ ಗಂಭೀರ ಸವಾಲಿನ ಸಮಯದಲ್ಲಿ ರಾಜಕೀಯಕ್ಕೆ ಅವಕಾಶವಿಲ್ಲ’’ ಎಂದು ರಿಜಿಜು ನುಡಿದರು.
‘‘ದೇಶ ಕಟ್ಟುವ ವಿಷಯದಲ್ಲಿ ನಾವು ರಾಜಕೀಯ ಮಾಡುವುದಿಲ್ಲ ಎನ್ನುವುದನ್ನು ಇಂದಿನ ಸಭೆ ತೋರಿಸಿದೆ ಎಂದು ರಕ್ಷಾ ಮಂತ್ರಿ ಹೇಳಿದ್ದಾರೆ’’ ಎಂದು ರಿಜಿಜು ನುಡಿದರು.
►ಪ್ರಧಾನಿ ಭಾಗವಹಿಸಬೇಕೆಂದು ಬಯಸಿದ್ದೆವು: ಖರ್ಗೆ
ಇಂದಿನ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಉಪಸ್ಥಿತರಿರುತ್ತಾರೆ ಎಂಬುದಾಗಿ ತಾನು ನಿರೀಕ್ಷಿಸಿದ್ದೆ ಎಂದು ಸರ್ವಪಕ್ಷ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ಹಾಗೂ ರಾಜ್ಯಸಭೆಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಅವರ ಅನುಪಸ್ಥಿತಿಯಿಂದಾಗಿ ನಿರಾಶೆಯಾಗಿದೆ ಎಂದು ಅವರು ಹೇಳಿದರು.
‘‘ಈ ಸಭೆಯಲ್ಲಿ ಪ್ರಧಾನಿ ಭಾಗವಹಿಸಿ, ಭಯೋತ್ಪಾದನೆ ವಿರುದ್ಧದ ಕಾರ್ಯಾಚರಣೆ ಬಗ್ಗೆ ಚುಟುಕಾಗಿ ಮಾತನಾಡಬೇಕೆಂದು ನಾವು ಬಯಸಿದ್ದೆವು. ಆದರೆ, ಅವರು ಬಂದಿಲ್ಲ. ಕಳೆದ ಸರ್ವಪಕ್ಷ ಸಭೆಗೂ ಅವರು ಬಂದಿಲ್ಲ. ಶೌರ್ಯ ಪ್ರದರ್ಶಿಸಿರುವ ನಮ್ಮ ಸೈನಿಕರನ್ನು ನಾವು ಅಭಿನಂದಿಸುತ್ತೇವೆ’’ ಎಂದು ಖರ್ಗೆ ನುಡಿದರು.
ಕಾಂಗ್ರೆಸ್ ಪಕ್ಷವು ಸರಕಾರವನ್ನು ಬೆಂಬಲಿಸುತ್ತದೆ ಎಂದು ಸಭೆಯಲ್ಲಿ ಉಪಸ್ಥಿತರಿದ್ದ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದರು. ‘‘ಆದರೆ, ಸಂಸತ್ನ ವಿಶೇಷ ಅಧಿವೇಶನ ಕರೆಯಬೇಕೆಂಬ ನಮ್ಮ ಬೇಡಿಕೆಗೆ ಸರಕಾರ ಒಪ್ಪಿದ್ದರೆ ಒಳ್ಳೆಯದಿತ್ತು’’ ಎಂದರು.







