ಪಿಒಕೆ ಜನರು ಸ್ವಇಚ್ಛೆಯಿಂದ ಭಾರತಕ್ಕೆ ಮರಳುವ ದಿನ ದೂರವಿಲ್ಲ: ರಾಜನಾಥ್ ಸಿಂಗ್

ರಾಜನಾಥ್ ಸಿಂಗ್ | PTI
ಹೊಸದಿಲ್ಲಿ: ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ)ದ ಜನರು ಭಾರತೀಯ ಕುಟುಂಬದ ಭಾಗವಾಗಿದ್ದು, ಅವರು ಸ್ವಯಂ ಇಚ್ಛೆಯಿಂದ ಭಾರತದ ಮುಖ್ಯ ವಾಹಿನಿಗೆ ಹಿಂದಿರುಗುವ ದಿನ ದೂರವಿಲ್ಲ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುರುವಾರ ಹೇಳಿದ್ದಾರೆ.
ಸಿಐಐ ವ್ಯವಹಾರ ಶೃಂಗ ಸಭೆಯಲ್ಲಿ ಮಾತನಾಡಿದ ಸಿಂಗ್, ಪಾಕಿಸ್ತಾನದ ಬಗ್ಗೆ ಭಾರತದ ನೀತಿ ವಿಧಾನವನ್ನು ವಿವರಿಸಿದರು.
ಕೇಂದ್ರ ಸರಕಾರ ಭಯೋತ್ಪಾದನೆಗೆ ತನ್ನ ತಂತ್ರಗಾರಿಕೆ ಹಾಗೂ ಪ್ರತಿಕ್ರಿಯೆಯನ್ನು ಮರು ವಿನ್ಯಾಸಗೊಳಿಸಿದೆ ಹಾಗೂ ಮರು ವ್ಯಾಖ್ಯಾನಿಸಿದೆ. ಪಾಕಿಸ್ತಾನದೊಂದಿಗಿನ ಸಂಭಾವ್ಯ ಮಾತುಕತೆ ಭಯೋತ್ಪಾದನೆ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದ ಕುರಿತು ಮಾತ್ರ ನಡೆಯಲಿದೆ ಎಂದು ಅವರು ಹೇಳಿದರು.
‘‘ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಜನರು ನಮ್ಮವರು, ನಮ್ಮ ಕುಟುಂಬದ ಭಾಗ ಎಂಬುದು ನನ್ನ ಭಾವನೆ. ಇಂದು ಭೌಗೋಳಿಕ ಹಾಗೂ ರಾಜಕೀಯವಾಗಿ ನಮ್ಮಿಂದ ಪ್ರತ್ಯೇಕವಾಗಿರುವ ನಮ್ಮ ಸಹೋದರರು ಕೂಡ ತಮ್ಮ ಆತ್ಮದ ಕರೆಗೆ ಓಗೊಟ್ಟು ಕೆಲವು ದಿನಗಳಲ್ಲಿ ಭಾರತದ ಮುಖ್ಯ ವಾಹಿನಿಗೆ ಮರಳಲಿದ್ದಾರೆ ಎಂದು ನಮಗೆ ಸಂಪೂರ್ಣ ನಂಬಿಕೆ ಇದೆ’’ ಎಂದು ಅವರು ತಿಳಿಸಿದರು.
ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಹೆಚ್ಚಿನ ಜನರು ಭಾರತದೊಂದಿಗೆ ಆಳವಾದ ಸಂಬಂಧ ಹೊಂದಿದ್ದಾರೆ. ಕೆಲವರು ಮಾತ್ರ ದಾರಿತಪ್ಪಿದ್ದಾರೆ ಎಂದು ಅವರು ಹೇಳಿದರು.
ಭಾರತ ಯಾವಾಗಲೂ ಹೃದಯಗಳನ್ನು ಬೆಸೆಯುವ ಕುರಿತು ಮಾತನಾಡುತ್ತದೆ. ಪ್ರೀತಿ, ಏಕತೆ ಹಾಗೂ ಸತ್ಯದ ಹಾದಿಯಲ್ಲಿ ನಡೆಯುವ ಮೂಲಕ ತಮ್ಮದೇ ಭಾಗವಾದ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಹಿಂದಿರುಗುವ ಹಾಗೂ ‘‘ನಾನು ಭಾರತ, ನಾನು ಮರಳಿದ್ದೇನೆ’’ ಎಂದು ಹೇಳುವ ದಿನ ದೂರವಿಲ್ಲ ಎಂದು ಅವರು ಹೇಳಿದರು.
ಇದೇ ಸಂದರ್ಭ ಪಾಕಿಸ್ತಾನಕ್ಕೆ ಸ್ಪಷ್ಟ ಸಂದೇಶ ರವಾನಿಸಿದ ಅವರು, ಭಯೋತ್ಪಾದನೆಗೆ ಬೆಂಬಲ ನೀಡಿದರೆ ದೊಡ್ಡ ಬೆಲೆ ತೆರಬೇಕಾಗುತ್ತದೆ. ಈಗಾಗಲೇ ಅದರ ಅನುಭವ ಪಾಕಿಸ್ತಾನಕ್ಕೆ ಆಗಿದೆ ಎಂದರು.







