ಆಪರೇಷನ್ ಸಿಂಧೂರ ಕುರಿತು ಚರ್ಚೆ | ನಾವು ಎಷ್ಟು ಶತ್ರುವಿಮಾನಗಳನ್ನು ಹೊಡೆದುರುಳಿಸಿದ್ದೇವೆ ಎಂದು ಪ್ರತಿಪಕ್ಷ ಎಂದಿಗೂ ಕೇಳಲಿಲ್ಲ: ರಾಜನಾಥ್ ಸಿಂಗ್ ವಾಗ್ದಾಳಿ

ರಾಜನಾಥ್ ಸಿಂಗ್ | PC : PTI
ಹೊಸದಿಲ್ಲಿ,ಜು.28: ಸೋಮವಾರ ಲೋಕಸಭೆಯಲ್ಲಿ ಆಪರೇಷನ್ ಸಿಂಧೂರ ಕುರಿತು ಚರ್ಚೆಯ ಸಂದರ್ಭದಲ್ಲಿ ಪ್ರತಿಪಕ್ಷಗಳನ್ನು ತರಾಟೆಗೆತ್ತಿಕೊಂಡ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ಅವು ತಪ್ಪು ಪ್ರಶ್ನೆಗಳನ್ನೇ ಕೇಳುತ್ತಿವೆ ಎಂದು ಆರೋಪಿಸಿದರು.
ಭಾರತದ ಕಡೆ ಸಂಭಾವ್ಯ ಸಾವುನೋವುಗಳ ಕುರಿತು ಕೆಲವು ಪ್ರತಿಪಕ್ಷ ಸಂಸದರು ಎತ್ತಿದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಸಿಂಗ್,‘ಅವರು ಪ್ರಶ್ನೆಗಳನ್ನು ಕೇಳುವ ರೀತಿಯು ದೇಶದ ಭಾವನೆಗಳನ್ನು ಪ್ರತಿಬಿಂಬಿಸುವುದಿಲ್ಲ. ನಮ್ಮ ಎಷ್ಟು ವಿಮಾನಗಳನ್ನು ಹೊಡೆದುರುಳಿಸಲಾಗಿದೆ ಎಂದು ಪ್ರತಿಪಕ್ಷಗಳ ಕೆಲವು ಸದಸ್ಯರು ಕೇಳುತ್ತಿದ್ದಾರೆ. ಅವರ ಪ್ರಶ್ನೆ ನಮ್ಮ ರಾಷ್ಟ್ರೀಯ ಭಾವನೆಗಳನ್ನು ಸಮರ್ಪಕವಾಗಿ ಪ್ರತಿನಿಧಿಸುವುದಿಲ್ಲ ಎಂದು ನಾನು ಭಾವಿಸಿದ್ದೇನೆ. ನಮ್ಮ ಸಶಸ್ತ್ರ ಪಡೆಗಳು ಎಷ್ಟು ಶತ್ರು ವಿಮಾನಗಳನ್ನು ಹೊಡೆದುರುಳಿಸಿವೆ ಎಂದು ಅವರು ನಮ್ಮನ್ನು ಎಂದಿಗೂ ಕೇಳಿಲ್ಲ’ ಎಂದು ಹೇಳಿದರು.
‘ಅವರು ಪ್ರಶ್ನೆಯೊಂದನ್ನು ಕೇಳಬೇಕಾದರೆ ಅದು ಭಾರತವು ಭಯೋತ್ಪಾದಕರ ನೆಲೆಗಳನ್ನು ನಾಶಪಡಿಸಿದೆಯೇ ಎಂದಾಗಿರಬೇಕು ಮತ್ತು ಹೌದು ಎನ್ನುವುದು ಅದಕ್ಕೆ ಉತ್ತರ. ನಿಮಗೆ ಪ್ರಶ್ನೆಯೊಂದನ್ನು ಕೇಳಬೇಕಿದ್ದರೆ ಈ ಕಾರ್ಯಾಚರಣೆಯಲ್ಲಿ ನಮ್ಮ ಯಾವುದೇ ಧೈರ್ಯಶಾಲಿ ಯೋಧರಿಗೆ ಹಾನಿಯಾಗಿದೆಯೇ ಎಂದು ಕೇಳಿ. ಇಲ್ಲ ಎನ್ನುವುದು ಈ ಪ್ರಶ್ನೆಗೆ ಉತ್ತರವಾಗಿದೆ,ನಮ್ಮ ಯಾವುದೇ ಯೋಧರಿಗೆ ಹಾನಿಯಾಗಿಲ್ಲ’ ಎಂದರು.
ಅರ್ಥಪೂರ್ಣ ಮತ್ತು ಜವಾಬ್ದಾರಿಯುತ ಪ್ರಶ್ನೆಗಳನ್ನು ಕೇಳುವಲ್ಲಿ ಪ್ರತಿಪಕ್ಷಗಳು ವಿಫಲವಾಗುತ್ತಿವೆ ಎಂದು ಕುಟುಕಿದ ಸಿಂಗ್,ಆಪರೇಷನ್ ಸಿಂಧೂರದ ಯಶಸ್ಸನ್ನು ಈಗಾಗಲೇ ಸದನಕ್ಕೆ ತಿಳಿಸಲಾಗಿದೆ ಎಂದು ಹೇಳಿದರು.
ಯಾವುದೇ ದೇಶದಲ್ಲಿ ಸಾರ್ವಜನಿಕರು ಆಡಳಿತ ಪಕ್ಷ ಮತ್ತು ಪ್ರತಿಪಕ್ಷಕ್ಕೆ ವಿಭಿನ್ನ ಜವಾಬ್ದಾರಿಗಳನ್ನು ವಹಿಸುತ್ತಾರೆ. ಎರಡೂ ಕಡೆಗಳು ತಮ್ಮದೇ ಆದ ಪಾತ್ರಗಳನ್ನು ಹೊಂದಿರುತ್ತವೆ ಮತ್ತು ಆರೋಗ್ಯಕರ ಪ್ರಜಾಸತ್ತಾತ್ಮಕ ಚರ್ಚೆಗಳು ನಡೆಯುವುದು ಸಹಜ. ಜನರ ಹಿತದೃಷ್ಟಿಯಿಂದ ಕಾರ್ಯ ನಿರ್ವಹಿಸುವುದು ಆಡಳಿತ ಪಕ್ಷದ ಕೆಲಸವಾಗಿದ್ದರೆ ಸಾರ್ವಜನಿಕರ ಸಮಸ್ಯೆಗಳಿಗೆ ಸಂಬಂಧಿಸಿದ ಅಗತ್ಯ ಪ್ರಶ್ನೆಗಳನ್ನು ಸರಕಾರಕ್ಕೆ ಕೇಳುವುದು ಪ್ರತಿಪಕ್ಷದ ಕೆಲಸವಾಗಿದೆ ಎಂದು ಸಿಂಗ್ ಹೇಳಿದರು.
ತುಲನಾತ್ಮಕವಾಗಿ ಸಣ್ಣ ವಿಷಯಗಳ ಬದಲು ಮಹತ್ವದ ರಾಷ್ಟ್ರೀಯ ವಿಷಯಗಳ ಬಗ್ಗೆ ಗಮನ ಹರಿಸುವಂತೆ ಕರೆ ನೀಡಿದ ಅವರು, ಅನಗತ್ಯ ಪ್ರಶ್ನೆಗಳು ರಾಷ್ಟ್ರೀಯ ಭದ್ರತೆ ಮತ್ತು ಸಶಸ್ತ್ರ ಪಡೆಗಳ ನೈತಿಕ ಸ್ಥೈರ್ಯಕ್ಕೆ ಹಾನಿಯನ್ನುಂಟು ಮಾಡಬಹುದು ಎಂದು ಎಚ್ಚರಿಕೆ ನೀಡಿದರು.
‘ನಮ್ಮ ಗುರಿಗಳು ದೊಡ್ಡದಾಗಿರುವಾಗ ತುಲನಾತ್ಮಕವಾಗಿ ಸಣ್ಣ ವಿಷಯಗಳ ಮೇಲೆ ನಾವು ಗಮನವನ್ನು ಕೇಂದ್ರೀಕರಿಸಬಾರದು. ಏಕೆಂದರೆ ನಾವು ನಿರಂತರವಾಗಿ ಸಣ್ಣ ವಿಷಯಗಳ ಮೇಲೆ ಗಮನವನ್ನು ಕೇಂದ್ರೀಕರಿಸುವುದರಿಂದ ರಾಷ್ಟ್ರೀಯ ಭದ್ರತೆ ಹಾಗೂ ನಮ್ಮ ಯೋಧರ ಗೌರವ ಮತ್ತು ಮನೋಬಲದಂತಹ ಪ್ರಮುಖ ವಿಷಯಗಳಿಂದ ಗಮನವು ಬೇರೆಡೆಗೆ ತಿರುಗಬಹುದು. ನಮ್ಮ ಕೆಲವು ಪ್ರತಿಪಕ್ಷ ಸದಸ್ಯರೊಂದಿಗೆ ಇದೇ ಆಗುತ್ತಿರುವಂತೆ ಕಾಣುತ್ತಿದೆ’ ಎಂದು ಸಿಂಗ್ ಹೇಳಿದರು.







