ಚುನಾವಣಾ ಆಯೋಗದ ವಿರುದ್ಧ ‘ಪುರಾವೆಯ ಅಣುಬಾಂಬ್’ ಸ್ಫೋಟಿಸಿ: ರಾಹುಲ್ಗೆ ರಾಜನಾಥ್ ಸವಾಲು

ರಾಹುಲ್ ಗಾಂಧಿ, ರಾಜನಾಥ್ ಸಿಂಗ್ | PTI
ಹೊಸದಿಲ್ಲಿ,ಆ.2: ಚುನಾವಣಾ ಆಯೋಗವು ಬಿಹಾರದಲ್ಲಿ ‘ಮತ ಕಳ್ಳತನ’ ಮಾಡುತ್ತಿದೆ ಎನ್ನುವುದನ್ನು ಸಾಬೀತುಗೊಳಿಸುವ ‘ಪುರಾವೆಯ ಅಣುಬಾಂಬ್’ ತನ್ನ ಬಳಿಯಿದೆ ಎಂದು ಹೇಳಿಕೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಶನಿವಾರ ತೀವ್ರ ತರಾಟೆಗೆತ್ತಿಕೊಂಡರು.
ಮಾಧ್ಯಮ ಸಂಸ್ಥೆಯೊಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಂಗ್ ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯನ್ನು ಕವಲು ದಾರಿಗೆ ಹೋಲಿಸಿದರು. ಒಂದು ಮಾರ್ಗವು(ಎನ್ಡಿಎ ಅಡಿ) ಇನ್ನಷ್ಟು ಪ್ರಗತಿಯತ್ತ ಮುನ್ನಡೆಸುತ್ತದೆ ಮತ್ತು ಇನ್ನೊಂದು ಮಾರ್ಗವು(ಇಂಡಿಯಾ ಮೈತ್ರಿಕೂಟದಡಿ) ಬಿಹಾರವನ್ನು ಅರಾಜಕತೆ ಮತ್ತು ಜಾತಿ ಕಲಹದ ಅದರ ಹಳೆಯ ಯುಗಕ್ಕೆ ಮರಳಿಸುತ್ತದೆ ಎಂದು ಅವರು ಹೇಳಿದರು.
ರಾಹುಲ್ ಗಾಂಧಿ ತನ್ನ ಬಳಿ ಅಣುಬಾಂಬ್ ಇದೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಹಾಗಿದ್ದರೆ ಅವರು ಅದನ್ನು ತಕ್ಷಣ ಸ್ಫೋಟಿಸಬೇಕು. ಅವರು ಸ್ವತಃ ಅಪಾಯದಿಂದ ಪಾರಾಗುವುದನ್ನು ಖಚಿತಪಡಿಸಿಕೊಳ್ಳಬೇಕಷ್ಟೇ ಎಂದು ಹೇಳಿದ ರಾಜನಾಥ್, ಅವರ ಹಿಂದಿನ ಬಡಾಯಿಗಳನ್ನು ದೇಶವು ಮರೆತಿಲ್ಲ. ತಾನು ಮಾತನಾಡಿದರೆ ಸಂಸತ್ತಿನಲ್ಲಿ ಭೂಕಂಪನ ಸಂಭವಿಸುತ್ತದೆ ಎಂದು ಅವರು ಬೆದರಿಸಿದ್ದರು. ಬಳಿಕ ಅದು ಠುಸ್ ಪಟಾಕಿಯಾಗಿತ್ತು ಎಂದು ಕುಟುಕಿದರು.
ಭಾರತದ ಚುನಾವಣಾ ಆಯೋಗವು ತನ್ನ ಪ್ರಶ್ನಾತೀತ ಪ್ರಾಮಾಣಿಕತೆಗೆ ಹೆಸರಾಗಿರುವ ಸಂಸ್ಥೆಯಾಗಿದೆ. ಬಿಹಾರದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯು ಮುಕ್ತ ಮತ್ತು ನ್ಯಾಯಸಮ್ಮತ ರೀತಿಯಲ್ಲಿ ನಡೆಯುವುದನ್ನು ಖಚಿತಪಡಿಸಿಕೊಳ್ಳಲು ಅದು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ಸಾಂವಿಧಾನಿಕ ಸಂಸ್ಥೆಯ ವಿರುದ್ಧ ಕ್ಷುಲ್ಲಕ ಹೇಳಿಕೆಗಳನ್ನು ನೀಡುವುದು ವಿಪಕ್ಷ ನಾಯಕರಿಗೆ ಶೋಭೆಯನ್ನುಂಟು ಮಾಡುವುದಿಲ್ಲ ಎಂದು ಹೇಳಿದರು.
1975ರಲ್ಲಿ ತುರ್ತು ಪರಿಸ್ಥಿತಿಯನ್ನು ಹೇರುವ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆಗೆ ಯತ್ನಿಸಿದ್ದ ನಿಮ್ಮ ಸ್ವಂತ ಪಕ್ಷದ ಕೈಗಳಿಗೆ ರಕ್ತ ಮೆತ್ತಿಕೊಂಡಿದೆ ಎಂದು ಸಿಂಗ್ ರಾಹುಲ್ ಗೆ ನೆನಪಿಸಿದರು.
ಬಿಹಾರದಲ್ಲಿ ತನ್ನ 20 ವರ್ಷಗಳ ಆಳ್ವಿಕೆಯಲ್ಲಿ ರಾಜ್ಯವು ಪ್ರಗತಿಯತ್ತ ಸಾಗಲು ನೆರವಾಗಿದ್ದಕ್ಕಾಗಿ ಮೈತ್ರಿಕೂಟದ ಪಾಲುದಾರ ನಿತೀಶ್ ಕುಮಾರ್ ಅವರನ್ನು ಸಿಂಗ್ ಪ್ರಶಂಸಿಸಿದರು.







