ಭಾರತೀಯ ಪ್ರತಿಕ್ರಿಯೆ ಇತಿಹಾಸ, ಭೂಗೋಳ ಎರಡನ್ನೂ ಬದಲಾಯಿಸಬಹುದು : ಸರ್ ಕ್ರೀಕ್ ಸಮೀಪ ಸೇನಾ ಜಮಾವಣೆ ಮಾಡಿದ ಪಾಕ್ಗೆ ರಾಜ್ನಾಥ್ ಸಿಂಗ್ ಎಚ್ಚರಿಕೆ

ರಾಜ್ನಾಥ್ ಸಿಂಗ್ | Photo Credit : PTI
ಭುಜ್, ಅ. 2: ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿರುವ ಸರ್ ಕ್ರೀಕ್ ವಲಯದ ಸಮೀಪದಲ್ಲಿ ಇತ್ತೀಚೆಗೆ ಸೇನಾ ಜಮಾವಣೆ ಮಾಡಿರುವುದಕ್ಕಾಗಿ ರಕ್ಷಣಾ ಸಚಿವ ರಾಜ್ನಾಥ್ ಸಿಂಗ್ ಗುರುವಾರ ಪಾಕಿಸ್ತಾನಕ್ಕೆ ಕಠಿಣ ಎಚ್ಚರಿಕೆ ನೀಡಿದ್ದಾರೆ. ಪಾಕಿಸ್ತಾನದ ಯಾವುದೇ ದುಸ್ಸಾಹಸಕ್ಕೆ ಭಾರತ ಎಷ್ಟು ಪ್ರಬಲ ಪ್ರತಿಕ್ರಿಯೆ ನೀಡುವುದೆಂದರೆ ಅದು ‘‘ಇತಿಹಾಸ ಮತ್ತು ಭೂಗೋಳ ಎರಡನ್ನೂ ಬದಲಾಯಿಸಬಹುದು’’ ಎಂದು ಹೇಳಿದ್ದಾರೆ.
ಗುಜರಾತ್ನ ಭುಜ್ನಲ್ಲಿರುವ ಸೇನಾ ನೆಲೆಯಲ್ಲಿ ‘‘ಶಸ್ತ್ರ ಪೂಜೆ’’ ಸಂದರ್ಭದಲ್ಲಿ ಭಾಗವಹಿಸಿದ ಬಳಿಕ ಸೈನಿಕರನ್ನು ಉದ್ದೇಶಿಸಿ ಮಾತನಾಡಿದ ರಕ್ಷಣಾ ಸಚಿವರು, ಪಾಕಿಸ್ತಾನವು ಉದ್ದೇಶಪೂರ್ವಕವಾಗಿ ಸರ್ ಕ್ರೀಕ್ ವಲಯದಲ್ಲಿ ದೀರ್ಘಕಾಲೀನ ಗಡಿ ವಿವಾದವನ್ನು ಕೆದಕುತ್ತಿದೆ ಎಂದು ಆರೋಪಿಸಿದರು.
‘‘ಸ್ವಾತಂತ್ರ್ಯ ಲಭಿಸಿ 78 ವರ್ಷಗಳಾದರೂ ಸರ್ ಕ್ರೀಕ್ ವಲಯದಲ್ಲಿ ಗಡಿಗೆ ಸಂಬಂಧಿಸಿದ ವಿವಾದವೊಂದನ್ನು ಕೆದಕಲಾಗುತ್ತಿದೆ. ಈ ವಿವಾದವನ್ನು ಮಾತುಕತೆಯ ಮೂಲಕ ಇತ್ಯರ್ಥಪಡಿಸಲು ಹಲವು ಪ್ರಯತ್ನಗಳನ್ನು ಭಾರತ ಮಾಡಿದೆ. ಆದರೆ ಪಾಕಿಸ್ತಾನದ ಉದ್ದೇಶಗಳಲ್ಲಿ ದೋಷವಿದೆ. ಅದರ ಉದ್ದೇಶಗಳು ಅಸ್ಪಷ್ಟವಾಗಿದೆ. ಸರ್ ಕ್ರೀಕ್ ವಲಯಕ್ಕೆ ಹೊಂದಿಕೊಂಡ ಪ್ರದೇಶಗಳಲ್ಲಿ ಸೇನಾ ಪಾಕಿಸ್ತಾನಿ ಸೇನೆಯು ಇತ್ತೀಚೆಗೆ ಮೂಲಸೌಕರ್ಯಗಳನ್ನು ವಿಸ್ತರಿಸಿರುವುದು ಅದರ ಉದ್ದೇಶಗಳನ್ನು ಬಹಿರಂಗೊಳಿಸಿದೆ’’ ಎಂದು ಸಿಂಗ್ ಹೇಳಿದರು.
ಗುಜರಾತ್ಗೆ ಹೊಂದಿಕೊಂಡಿರುವ ಕಚ್ ರಣದಲ್ಲಿರುವ 96 ಕಿಲೋ ಮೀಟರ್ ಜೌಗು ಪ್ರದೇಶವಾಗಿರುವ ಸರ್ ಕ್ರೀಕ್ ಭಾರತ ಮತ್ತು ಪಾಕಿಸ್ತಾನ ನಡುವಿನ ವಿವಾದಿತ ಪ್ರದೇಶವಾಗಿದೆ.
‘‘ಭಾರತೀಯ ಸೇನೆ ಮತ್ತು ಗಡಿ ಭದ್ರತಾ ಪಡೆ (ಬಿಎಸ್ಎಫ್) ಭಾರತದ ಗಡಿಗಳನ್ನು ಜಂಟಿಯಾಗಿ ಎಚ್ಚರಿಕೆಯಿಂದ ಕಾಯುತ್ತಿವೆ. ಸರ್ ಕ್ರೀಕ್ ಪ್ರದೇಶದಲ್ಲಿ ಪಾಕಿಸ್ತಾನಿ ಕಡೆಯಿಂದ ಯಾವುದೇ ದುಸ್ಸಾಹಸ ನಡೆದರೆ, ಅದಕ್ಕೆ ನಿರ್ಣಾಯಕ ಪ್ರತಿಕ್ರಿಯೆಯನ್ನು ನೀಡಲಾಗುವುದು ಮತ್ತು ಆ ಪ್ರತಿಕ್ರಿಯೆಯು ಇತಿಹಾಸ ಮತ್ತು ಭೂಗೋಳ ಎರಡನ್ನೂ ಬದಲಾಯಿಸುವುದು’’ ಎಂದು ರಾಜ್ನಾಥ್ ಸಿಂಗ್ ಎಚ್ಚರಿಸಿದರು.







