ಪಾಕಿಸ್ತಾನದ ಪ್ರತಿಯೊಂದು ಇಂಚು ಬ್ರಹ್ಮೋಸ್ನ ವ್ಯಾಪ್ತಿಯಲ್ಲಿ : ರಾಜ್ನಾಥ್ ಸಿಂಗ್ ಎಚ್ಚರಿಕೆ

ರಾಜ್ನಾಥ್ ಸಿಂಗ್ |Photo Credit : PTI
ಲಕ್ನೋ, ಅ. 18: ಭಾರತೀಯ ಸೇನೆಯ ‘ಆಪರೇಶನ್ ಸಿಂಧೂರ’ ಕಾರ್ಯಾಚರಣೆಯನ್ನು ಶನಿವಾರ ಶ್ಲಾಘಿಸಿರುವ ರಕ್ಷಣಾ ಸಚಿವ ರಾಜ್ನಾಥ್ ಸಿಂಗ್, ಭಾರತದ ಸೇನಾ ಶಕ್ತಿ ಯಾವ ಹಂತವನ್ನು ತಲುಪಿದೆಯೆಂದರೆ, ‘‘ಈಗ ಗೆಲ್ಲುವುದು ಒಂದು ಅಭ್ಯಾಸವಾಗಿದೆ’’ ಎಂದು ಹೇಳಿದ್ದಾರೆ.
‘‘ಜಯ ಎನ್ನುವುದು ಇನ್ನೆಂದಿಗೂ ನಮಗೆ ಅಪರಿಚಿತವಲ್ಲ ಎನ್ನುವುದನ್ನು ಆಪರೇಶನ್ ಸಿಂಧೂರ ಸಾಬೀತುಪಡಿಸಿದೆ. ಗೆಲ್ಲುವುದು ಈಗ ನಮಗೆ ಅಭ್ಯಾಸವಾಗಿ ಬಿಟ್ಟಿದೆ’’ ಎಂದು ಅವರು ಹೇಳಿದರು.
ಲಕ್ನೋದ ಬ್ರಹ್ಮೋಸ್ ಏರೋಸ್ಪೇಸ್ ಸ್ಥಾವರದಲ್ಲಿ ನಿರ್ಮಿಸಲಾದ ಬ್ರಹ್ಮೋಸ್ ಕ್ಷಿಪಣಿಗಳ ಮೊದಲ ಗುಂಪಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಉಪಸ್ಥಿತರಿದ್ದರು.
ಲಕ್ನೋದ ಸರೋಜಿನಿ ನಗರದಲ್ಲಿರುವ ಬ್ರಹ್ಮೋಸ್ ಏರೋಸ್ಪೇಸ್ ನ ನೂತನ ಸಮನ್ವಯ ಮತ್ತು ಪರೀಕ್ಷಾ ಘಟಕದಲ್ಲಿ ಮೊದಲ ಗುಂಪಿನ ಬ್ರಹ್ಮೋಸ್ ಕ್ಷಿಪಣಿಗಳ ಉತ್ಪಾದನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ ಎಂದು ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿ ವ್ಯವಸ್ಥೆಯ ತಯಾರಕ ಸಂಸ್ಥೆ ಬ್ರಹ್ಮೋಸ್ ಏರೋಸ್ಪೇಸ್ ಘೋಷಿಸಿದೆ.
ನಿಖರತೆ ಮತ್ತು ಸಿದ್ಧತೆಗಾಗಿ ಸಶಸ್ತ್ರ ಪಡೆಗಳನ್ನು ಶ್ಲಾಘಿಸಿದ ರಾಜ್ನಾಥ್ ಸಿಂಗ್, ಭಾರತದ ಶತ್ರುಗಳು ಇನ್ನು ದೇಶದ ಆಧುನಿಕ ಕ್ಷಿಪಣಿ ವ್ಯವಸ್ಥೆಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.
‘‘ನಮ್ಮ ಶತ್ರುಗಳು ಬ್ರಹ್ಮೋಸ್ ಕ್ಷಿಪಣಿಗಳಿಂದ ಇನ್ನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಬಗ್ಗೆ ನಮಗೆ ವಿಶ್ವಾಸವಿದೆ. ಪಾಕಿಸ್ತಾನಿ ಭೂಭಾಗದ ಪ್ರತಿಯೊಂದು ಇಂಚು ಈಗ ನಮ್ಮ ಬ್ರಹ್ಮೋಸ್ನ ವ್ಯಾಪ್ತಿಯಲ್ಲಿದೆ’’ ಎಂದು ರಕ್ಷಣಾ ಸಚಿವರು ತಿಳಿಸಿದರು.
‘ಆಪರೇಶನ್ ಸಿಂಧೂರ’ದ ಚಟುವಟಿಕೆಗಳು ಭಾರತದ ಸೇನಾ ಸಾಮರ್ಥ್ಯದ ಒಂದು ತುಣುಕು ಮಾತ್ರ ಎಂಬ ಎಚ್ಚರಿಕೆಯನ್ನೂ ರಕ್ಷಣಾ ಸಚಿವರು ಪಾಕಿಸ್ತಾನಕ್ಕೆ ನೀಡಿದರು.
‘‘ಆಪರೇಶನ್ ಸಿಂಧೂರದಲ್ಲಿ ನಡೆದದ್ದು ಟ್ರೇಲರ್ ಮಾತ್ರ. ಭಾರತವು ಪಾಕಿಸ್ತಾನಕ್ಕೆ ಜನ್ಮ ನೀಡಿದೆಯಾದರೆ, ಅದು ಬೇರೆ ಏನನ್ನು ಮಾಡಬಹುದು ಎಂಬ ಬಗ್ಗೆ ನಾನು ಏನನ್ನು ಹೇಳುವ ಅಗತ್ಯವಿಲ್ಲ’’ ಎಂದರು.







