ಚೀನಾದಲ್ಲಿ ನಡೆಯಲಿರುವ ಎಸ್‌ಸಿಒ ಸಭೆಯಲ್ಲಿ ರಾಜ್‌ನಾಥ್ ಸಿಂಗ್ ಪಾಲ್ಗೊಳ್ಳುವ ಸಾಧ್ಯತೆ
ಗಾಲ್ವನ್ ಸಂಘರ್ಷದ ನಂತರ ಇದೇ ಪ್ರಥಮ ಬಾರಿಗೆ ಚೀನಾಗೆ ಭೇಟಿ ನೀಡಲಿರುವ ರಕ್ಷಣಾ ಸಚಿವ

ಹೊಸದಿಲ್ಲಿ: ಈ ತಿಂಗಳಾಂತ್ಯದಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಘಟನೆಯ ರಕ್ಷಣಾ ಸಚಿವರ ಸಭೆಯಲ್ಲಿ ಪಾಲ್ಗೊಳ್ಳಲು ಕೇಂದ್ರ ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ಚೀನಾದ ಕ್ವಿಂಗ್ಡಾವೊಗೆ ಭೇಟಿ ನೀಡುವ ಸಾಧ್ಯತೆ ಇದೆ.
ಈ ವರ್ಷ ಚೀನಾ ಈ ಶೃಂಗಸಭೆಯ ಆತಿಥ್ಯ ವಹಿಸುತ್ತಿದ್ದು, ಈ ಸಭೆಯ ಆಮಂತ್ರಣವನ್ನು ರಾಜ್‌ನಾಥ್ ಸಿಂಗ್ ಗೂ ರವಾನಿಸಿದೆ. 2020ರಲ್ಲಿ ಗಾಲ್ವನ್ ಸಂಘರ್ಷ ನಡೆದ ನಂತರ, ರಾಜ್ ನಾಥ್ ಸಿಂಗ್ ಚೀನಾಗೆ ನೀಡುತ್ತಿರುವ ಪ್ರಥಮ ಭೇಟಿ ಇದಾಗಿದೆ.
ಪೂರ್ವ ಲಡಾಖ್ ನಲ್ಲಿರುವ ವಾಸ್ತವ ನಿಯಂತ್ರಣ ರೇಖೆ ಬಳಿಯ ಗಸ್ತು ಕಾರ್ಯಾಚರಣೆಯನ್ನು ಪುನಾರಂಭಿಸಬೇಕು ಹಾಗೂ ಅಲ್ಲಿಂದ ಸೇನಾ ತುಕಡಿಗಳನ್ನು ಹಿಂಪಡೆಯಬೇಕು ಎಂದು ಉಭಯ ದೇಶಗಳ ನಡುವೆ ಅಕ್ಟೋಬರ್ 2024ರಲ್ಲಿ ಒಪ್ಪಂದವೇರ್ಪಟ್ಟ ನಂತರ, ಚೀನಾದಲ್ಲಿ ನಡೆಯುತ್ತಿರುವ ಪ್ರಪ್ರಥಮ ಭಾರತೀಯ ಸಚಿವ ಮಟ್ಟದ ಸಭೆ ಎಂಬ ಶ್ರೇಯಕ್ಕೆ ಈ ಭೇಟಿ ಭಾಜನವಾಗಲಿದೆ.
ಈ ನಡುವೆ, ಗಡಿಯಲ್ಲಿನ ಉದ್ವಿಗ್ನತೆಯನ್ನು ಶಮನಗೊಳಿಸಲು ಹಾಗೂ ದ್ವಿಪಕ್ಷೀಯ ಸಂಬಂಧಗಳನ್ನು ಸುಧಾರಿಸಲು ಭಾರತ ಮತ್ತು ಚೀನಾ ದೇಶಗಳು ಮಾತುಕತೆಯಲ್ಲಿ ನಿರತವಾಗಿವೆ. ಲಾವೋಸ್ ನಲ್ಲಿ ನಡೆದಿದ್ದ ಎಡಿಎಂಎಂ-ಪ್ಲಸ್ ಶೃಂಗಸಭೆಯಲ್ಲಿ ಕಡೆಯ ಬಾರಿ ಚೀನಾದ ರಕ್ಷಣಾ ಸಚಿವ ಅಡ್ಮಿರಲ್ ಡಾಂಗ್ ಜುನ್ ರನ್ನು ಭೇಟಿಯಾಗಿದ್ದ ರಾಜ್‌ನಾಥ್ ಸಿಂಗ್, ಉಭಯ ದೇಶಗಳ ನಡುವಿನ ಸಂಘರ್ಷವನ್ನು ಶಮನಗೊಳಿಸುವ ಒಪ್ಪಂದದ ಕುರಿತು ಮಾತುಕತೆ ನಡೆಸಿದ್ದರು. ಇದು ಅವರಿಬ್ಬರ ನಡುವಿನ ಪ್ರಥಮ ಭೇಟಿಯೂ ಆಗಿತ್ತು.





