ರಾಜ್ಯಸಬಾ ಚುನಾವಣೆ | ನಟ ಕಮಲ್ ಹಾಸನ್ ಸಹಿತ ಡಿಎಂಕೆ, ಎಐಎಡಿಎಂಕೆ, ಎಂಎನ್ಎಂ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ

PC : PTI
ಚೆನ್ನೈ: ತಮಿಳುನಾಡಿನ ರಾಜ್ಯ ಸಭಾ ಕ್ಷೇತ್ರಗಳಿಗೆ ನಡೆಯುವ ಚುನಾವಣೆಗೆ ದ್ರಾವಿಡ ಮುನ್ನೆತ್ರ ಕಳಗಂ (ಡಿಎಂಕೆ), ಆಲ್ ಇಂಡಿಯಾ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಹಾಗೂ ಮಕ್ಕಳ್ ನೀಧಿ ಮೆಯ್ಯಮ್ ನ ಅಭ್ಯರ್ಥಿಗಳು ಇಲ್ಲಿನ ತಮಿಳುನಾಡು ಸಚಿವಾಲಯದಲ್ಲಿ ಶುಕ್ರವಾರ ನಾಮಪತ್ರ ಸಲ್ಲಿಸಿದರು.
ಮರುಮಲರ್ಚಿ ದ್ರಾವಿಡ ಮುನ್ನೇತ್ರ ಕಳಗಂ (ಎಂಡಿಎಂಕೆ)ನ ವೈಕೊ, ಪಟ್ಟಾಳಿ ಮಕ್ಕಳ್ ಕಚ್ಚಿ (ಪಿಎಂಕೆ)ಯ ಅನ್ಬುಮಣಿ ರಾಮದಾಸ್, ಡಿಎಂಕೆಯ ಪಿ. ವಿಲ್ಸನ್, ಷಣ್ಮುಗಂ ಹಾಗೂ ಅಬ್ದುಲ್ಲಾ, ಎಐಡಿಎಂಕೆಯ ಚಂದ್ರಶೇಖರನ್ ಸೇರಿದಂತೆ 6 ಸಂಸದರ ಅಧಿಕಾರವಧಿ ಜುಲೈ ಅಂತ್ಯದಲ್ಲಿ ಕೊನೆಗೊಳ್ಳುವ ಹಿನ್ನೆಲೆಯಲ್ಲಿ ಈ ರಾಜ್ಯ ಸಭಾ ಸ್ಥಾನಗಳಿಗೆ ಜೂನ್ 19ರಂದು ಚುನಾವಣೆ ನಡೆಯಲಿದೆ.
ಡಿಎಂಕೆ ರಾಜ್ಯಸಭಾ ಅಭ್ಯರ್ಥಿಗಳಾದ ಪಿ. ವಿಲ್ಸನ್, ಎಸ್.ಆರ್. ಶಿವಲಿಂಗಂ, ಸಲ್ಮಾ ಹಾಗೂ ಡಿಎಂಕೆಯ ಮಿತ್ರ ಪಕ್ಷವಾದ ಮಕ್ಕಳ್ ನೀಧಿ ಮೆಯ್ಯಮ್ನ ನಾಯಕ ಹಾಗೂ ಖ್ಯಾತ ನಟ ಕಮಲ್ ಹಾಸನ್ ತಮಿಳುನಾಡಿನ ಸೆಕ್ರೇಟರಿಯೇಟ್ ನಲ್ಲಿ ಚುನಾವಣಾಧಿಕಾರಿ ಶಿವಸುಬ್ರಹ್ಮಣೀಯಂ ಅವರಿಗೆ ತಮ್ಮ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್, ಸಚಿವ ಇ.ವಿ. ವೇಲು, ಸಂಸದರಾದ ಟಿ.ಆರ್. ಬಾಲು, ಕನ್ನಿಮೋಳಿ, ತಮಿಳುನಾಡು ಕಾಂಗ್ರೆಸ್ ಕಮಿಟಿಯ ಅಧ್ಯಕ್ಷ ಸೆಲ್ವಪೆರುಂಥಗೈ, ಸಿಪಿಐ (ಮಾರ್ಕ್ಸಿಸ್ಟ್) ರಾಜ್ಯ ಕಾರ್ಯದರ್ಶಿ ಶಣ್ಮುಗಂ, ಮನಿತಾನೇಯ ಮಕ್ಕಳ್ ಕಚ್ಚಿಯ ಅಧ್ಯಕ್ಷ ಜವಾಹಿರುಲಾಲ್ ಹಾಗೂ ವಿಡುದಲೈ ಸಿರುತೈ ಕಚ್ಚಿ ನಾಯಕ ತಿರುಮಾವಲವನ್ ಮೊದಲಾದವರು ಉಪಸ್ಥಿತರಿದ್ದರು.
ಎಐಎಡಿಎಂಕೆಯ ಇಬ್ಬರು ಅಭ್ಯರ್ಥಿಗಳಾದ ಇನ್ಬದುರೈ ಹಾಗೂ ಧನಪಾಲ್ ಕೂಡ ಶುಕ್ರವಾರ ನಾಮಪತ್ರ ಸಲ್ಲಿಸಿದರು. ಈ ಸಂದರ್ಭ ಎಐಎಡಿಎಂಕೆಯ ಪ್ರಧಾನ ಕಾರ್ಯದರ್ಶಿ ಇಡಪಳ್ಳಿ ಪಳನಿಸ್ವಾಮಿ ಹಾಗೂ ಮಾಜಿ ಸಚಿವರಾದ ತಂಗಮಣಿ, ಅನ್ಬಳಗನ್, ಮುನುಸಾಮಿ, ಆರ್.ಪಿ. ಉದಯಕುಮಾರ್ ಹಾಗೂ ಸೆಂಥಗೊಟ್ಟೆಯನ್ ಉಪಸ್ಥಿರಿದ್ದರು.
ಭಾರತ ಚುನಾವಣಾ ಆಯೋಗ (ಇಸಿಐ) ತೆರವಾದ ರಾಜ್ಯ ಸಭೆಯ ಈ 6 ಸ್ಥಾನಗಳಿಗೆ ಜೂನ್ 19ರಂದು ಚುನಾವಣೆ ನಡೆಸಲಾಗುವುದು ಎಂದು ಘೋಷಿಸಿದೆ. ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಜೂನ್ 2ರಂದು ಆರಂಭವಾಗಿದೆ. ನಾಮಪತ್ರ ಸಲ್ಲಿಸಲು ಜೂನ್ 9 ಹಾಗೂ ನಾಮಪತ್ರ ಪರಿಶೀಲನೆಗೆ ಜೂನ್ 10 ಕೊನೆಯ ದಿನಾಂಕ. ನಾಮಪತ್ರ ಹಿಂಪಡೆಯಲು ಜೂನ್ 12 ಕೊನೆಯ ದಿನಾಂಕ ಎಂದು ಇಸಿಐ ಹೇಳಿದೆ.







