ಚೆಕ್ ಬೌನ್ಸ್ ಪ್ರಕರಣ : ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಗೆ 3 ತಿಂಗಳು ಜೈಲು ಶಿಕ್ಷೆ

ರಾಮ್ ಗೋಪಾಲ್ ವರ್ಮಾ (Photo:X/@filmfare)
ಮುಂಬೈ: ಚೆಕ್ ಬೌನ್ಸ್ ಪ್ರಕರಣದಲ್ಲಿ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರಿಗೆ ಮೂರು ತಿಂಗಳ ಜೈಲು ಶಿಕ್ಷೆ ಮತ್ತು ಜಾಮೀನು ರಹಿತ ವಾರಂಟ್ ಅನ್ನು ಅಂಧೇರಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ವಿಧಿಸಿದೆ.
ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿ 7 ವರ್ಷಗಳ ಸುದೀರ್ಘ ಅವಧಿಯ ಬಳಿಕ ಮುಂಬೈ ನ್ಯಾಯಾಲಯವು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರಿಗೆ ಜಾಮೀನು ರಹಿತ ವಾರಂಟ್ ಹೊರಡಿಸಿದೆ.
ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ( Negotiable Instruments Act) ಸೆಕ್ಷನ್ 138ರ ಪ್ರಕಾರ, ರಾಮ್ ಗೋಪಾಲ್ ವರ್ಮಾ ತಪ್ಪಿತಸ್ಥರೆಂದು ಕಂಡುಬಂದಿದೆ. ದೂರುದಾರರಿಗೆ ರಾಮ್ ಗೋಪಾಲ್ ವರ್ಮಾ 3.75 ಲಕ್ಷ ರೂ. ಪರಿಹಾರ ನೀಡಬೇಕು. ಮೂರು ತಿಂಗಳೊಳಗೆ ಮೊತ್ತವನ್ನು ಪಾವತಿಸಲು ವಿಫಲವಾದರೆ ಹೆಚ್ಚುವರಿ ಮೂರು ತಿಂಗಳ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ ಎಂದು ಕೋರ್ಟ್ ಆದೇಶದಲ್ಲಿ ತಿಳಿಸಿದೆ.
RGV ಸಂಸ್ಥೆಯ ವಿರುದ್ಧ ʼಶ್ರೀʼ ಎಂಬ ಕಂಪನಿಯು 2018ರಲ್ಲಿ ಚೆಕ್ ಬೌನ್ಸ್ ಪ್ರಕರಣವನ್ನು ದಾಖಲಿಸಿತ್ತು.
Next Story