ಏಕತಾ ಪ್ರತಿಮೆ ವಿನ್ಯಾಸಕ, ಪ್ರಸಿದ್ಧ ಶಿಲ್ಪಿ ರಾಮ್ ಸುತಾರ್ ನಿಧನ

ರಾಮ್ ಸುತಾರ್ (Photo credit: NDTV)
ನೋಯ್ಡಾ: ಗುಜರಾತ್ನಲ್ಲಿನ ವಿಶ್ವದ ಅತಿ ಎತ್ತರದ ಏಕತಾ ಪ್ರತಿಮೆಯನ್ನು ವಿನ್ಯಾಸಗೊಳಿಸಿದ ಪ್ರಸಿದ್ಧ ಶಿಲ್ಪಿ ರಾಮ್ ಸುತಾರ್ ಅವರು ನೋಯ್ಡಾದ ತಮ್ಮ ನಿವಾಸದಲ್ಲಿ ನಿಧನರಾದರು.
"ವಯೋಸಹೋಜ ಕಾಯಿಲೆಯಿಂದ ಬಳಲುತ್ತಿದ್ದ ರಾಮ್ ಸುತಾರ್ ಅವರು ಬುಧವಾರ ಮಧ್ಯರಾತ್ರಿ ತಮ್ಮ ನಿವಾಸದಲ್ಲಿ ನಿಧನರಾದರು" ಎಂದು ಅವರ ಪುತ್ರ ಅನಿಲ್ ಸುತಾರ್ ಗುರುವಾರ ಮಾಧ್ಯಮಗಳಿಗೆ ತಿಳಿಸಿದ್ದಾರೆ.
1925ರ ಫೆಬ್ರವರಿ 19ರಂದು ಮಹಾರಾಷ್ಟ್ರದ ಧುಲೆ ಜಿಲ್ಲೆಯ ಗೊಂಡೂರ್ ಗ್ರಾಮದಲ್ಲಿ ಜನಿಸಿದ ಸುತಾರ್ ಅವರು ಬಾಲ್ಯದಿಂದಲೇ ಶಿಲ್ಪಕಲೆಯತ್ತ ಆಕರ್ಷಿತರಾಗಿದ್ದರು. ಮುಂಬೈನ ಜೆಜೆ ಸ್ಕೂಲ್ ಆಫ್ ಆರ್ಟ್ ಅಂಡ್ ಆರ್ಕಿಟೆಕ್ಚರ್ನಿಂದ ಚಿನ್ನದ ಪದಕ ಪಡೆದಿರುವ ರಾಮ್ ಸುತಾರ್ ವೃತ್ತಿ ಜೀವನದಲ್ಲಿ ಮಹತ್ವದ ಸಾಧನೆಗೈದಿದ್ದಾರೆ.
ಅವರ ಅತ್ಯುತ್ತಮ ವಿನ್ಯಾಸಗಳಲ್ಲಿ ಧ್ಯಾನಸ್ಥ ರೀತಿಯಲ್ಲಿ ಕುಳಿತಿರುವ ಮಹಾತ್ಮ ಗಾಂಧಿಯವರ ಪ್ರತಿಮೆಗಳು ಮತ್ತು ಸಂಸತ್ತಿನ ಆವರಣದಲ್ಲಿ ಕುದುರೆ ಸವಾರಿ ಮಾಡುತ್ತಿರುವ ಛತ್ರಪತಿ ಶಿವಾಜಿಯ ಪ್ರತಿಮೆಗಳು ಸೇರಿವೆ. ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿರುವ ಕೆಂಪೇಗೌಡರ ಪ್ರತಿಮೆ, ಗುಜರಾತ್ನಲ್ಲಿರುವ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಪ್ರತಿಮೆಯನ್ನು ಇವರೇ ವಿನ್ಯಾಸಗೊಳಿಸಿದ್ದರು.
ಸುತಾರ್ ಅವರಿಗೆ 1999ರಲ್ಲಿ ಪದ್ಮಶ್ರೀ ಮತ್ತು 2016ರಲ್ಲಿ ಪದ್ಮಭೂಷಣ ಪ್ರಶಸ್ತಿಗಳನ್ನು ನೀಡಲಾಯಿತು. ಇತ್ತೀಚೆಗೆ, ರಾಜ್ಯದ ಅತ್ಯುನ್ನತ ಪ್ರಶಸ್ತಿಯಾದ “ಮಹಾರಾಷ್ಟ್ರ ಭೂಷಣ ಪುರಸ್ಕಾರ”ವನ್ನು ಅವರಿಗೆ ನೀಡಲಾಗಿತ್ತು.







