ದಾನಿಶ್ ಅಲಿ ವಿರುದ್ಧದ ಆಕ್ಷೇಪಾರ್ಹ ಹೇಳಿಕೆಗೆ ಕ್ಷಮೆ ಯಾಚಿಸಿದ ರಮೇಶ್ ಬಿದುರಿ
ರಮೇಶ್ ಬಿದುರಿ | Photo : PTI
ಹೊಸದಿಲ್ಲಿ: ಸೆಪ್ಟಂಬರ್ 21ರಂದು ಲೋಕಸಭೆ ಅಧಿವೇಶನದ ಸಂದರ್ಭ ಬಿಎಸ್ಪಿ ಸಂಸದ ದಾನಿಶ್ ಅಲಿ ಅವರ ವಿರುದ್ಧ ನೀಡಿದ ಆಕ್ಷೇಪಾರ್ಹ ಹೇಳಿಕೆಗೆ ವಿಷಾದಿಸುವುದಾಗಿ ಬಿಜೆಪಿ ಸಂಸದ ರಮೇಶ್ ಬಿದುರಿ ಗುರುವಾರ ಹೇಳಿದ್ದಾರೆ.
ಇಂದು ನಡೆದ ಲೋಕಸಭೆಯ ವಿಶೇಷಾಧಿಕಾರ ಸಮಿತಿ ಸಭೆಯಲ್ಲಿ ಉಭಯ ನಾಯಕರನ್ನು ಪ್ರತ್ಯೇಕವಾಗಿ ಕರೆದು ಮಾತನಾಡಿಸಲಾಗಿತ್ತು. ಸಮಿತಿಯಲ್ಲಿದ್ದ ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರು ರಮೇಶ್ ಬಿದುರಿ ಅವರು ತಾವು ನೀಡಿದ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದಾರೆ ಎಂದರು.
ಸಮಿತಿಯು ಗುರುವಾರ ಮೌಖಿಕ ಸಾಕ್ಷ್ಯ ನೀಡಲು ರಮೇಶ್ ಬಿದುರಿ (ಮುಸ್ಲಿಂ ವಿರೋಧಿ ಹೇಳಿಕೆ ) ಹಾಗೂ ದಾನಿಶ್ ಅಲಿ (ಸದನದಲ್ಲಿ ಚಂದ್ರಯಾನ-2 ಚರ್ಚೆ ಸಂದರ್ಭ ಅನುಚಿತ ವರ್ತನೆ) ಅವರನ್ನು ಕರೆದಿತ್ತು.
ಸೆಪ್ಟಂಬರ್ 21ರಂದು ಲೋಕಸಭೆಯಲ್ಲಿ ಚಂದ್ರಯಾನ-3 ಮಿಷನ್ ಯಶಸ್ಸಿನ ಕುರಿತ ಚರ್ಚೆಯ ಸಂದರ್ಭ ಮಾತನಾಡಿದ ರಮೇಶ್ ಬಿದುರಿ ಅವರು ಬಿಎಸ್ಪಿ ಸಂಸದ ದಾನಿಶ್ ಅಲಿ ಅವರನ್ನು ಗುರಿಯಾಗಿರಿಸಿಕೊಂಡು ಕೆಲವು ಅವಹೇಳನಾಕಾರಿ ಹೇಳಿಕೆಗಳನ್ನು ನೀಡಿದ್ದರು. ಅನಂತರ ಆ ಹೇಳಿಕೆಗಳನ್ನು ಕಲಾಪದ ಕಡತದಿಂದ ತೆಗೆದು ಹಾಕಲಾಗಿತ್ತು.
ಈ ಸಂದರ್ಭ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಈ ಹೇಳಿಕೆಯಿಂದ ಪ್ರತಿಪಕ್ಷದ ಸದಸ್ಯರಿಗೆ ನೋವುಂಟಾಗಿದ್ದರೆ, ಅದನ್ನು ಕಲಾಪಗಳ ಕಡತದಿಂದ ತೆಗೆದು ಹಾಕುವಂತೆ ಸಭಾಪತಿಯನ್ನು ಆಗ್ರಹಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಂಗ್ರೆಸ್ ಸದಸ್ಯ ಕೆ. ಸುರೇಶ್, ಆಕ್ಷೇಪಾರ್ಹ ಹೇಳಿಕೆಯನ್ನು ಕಲಾಪಗಳ ಕಡತದಿಂದ ತೆಗೆದು ಹಾಕುವಂತೆ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಿದ್ದೇನೆ ಎಂದರು.
ಸದಸ್ಯರು ನೀಡಿದ ಹೇಳಿಕೆಗಳಿಂದ ಪ್ರತಿಪಕ್ಷಗಳಿಗೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ರಕ್ಷಣಾ ಸಚಿವರು ಹೇಳಿದರು. ಇದನ್ನು ಅನುಸರಿಸಿ ಪ್ರತಿಪಕ್ಷದ ಸದಸ್ಯರು ಮೇಜುಗಳನ್ನು ತಟ್ಟುವುದರ ಮೂಲಕ ರಾಜನಾಥ್ ಅವರ ಇಂಗಿತವನ್ನು ಶ್ಲಾಘಿಸಿದರು.