ಅಮೆರಿಕ ಅಧಿಕಾರಿಗಳೊಂದಿಗೆ ಮಿಲಿಟರಿ ಕಾರ್ಯಾಚರಣೆಗಳ ಕುರಿತು ಮಾತ್ರ ಮಾತನಾಡಲಾಗಿತ್ತು: ರಣಧೀರ್ ಜೈಸ್ವಾಲ್
ವ್ಯಾಪಾರ ಒಪ್ಪಂದದ ಕುರಿತು ಟ್ರಂಪ್ ಅವರ ಹೇಳಿಕೆಯನ್ನು ತಿರಸ್ಕರಿಸಿದ ವಿದೇಶಾಂಗ ಸಚಿವಾಲಯ

ರಣಧೀರ್ ಜೈಸ್ವಾಲ್ | PTI
ಹೊಸದಿಲ್ಲಿ: ಮಿಲಿಟರಿ ಕಾರ್ಯಾಚರಣೆಗಳ ಕುರಿತು ಅಮೆರಿಕದ ಅಧಿಕಾರಿಗಳೊಂದಿಗೆ ಮಾತ್ರ ಮಾತನಾಡಲಾಗಿತ್ತು. ವ್ಯಾಪಾರ ಒಪ್ಪಂದದ ಕುರಿತು ಯಾವುದೇ ಮಾತುಕತೆ ನಡೆದಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.
ಮಂಗಳವಾರ ಸಂಜೆ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. "ಮೇ 7 ರಂದು ಆಪರೇಷನ್ ಸಿಂಧೂರ್ ಪ್ರಾರಂಭವಾದಾಗಿನಿಂದ ಮೇ 10ರ ಕದನ ವಿರಾಮದವರೆಗೆ, ಸೇನಾ ಕಾರ್ಯಾಚರಣೆ ಕುರಿತು ಭಾರತ ಮತ್ತು ಅಮೆರಿಕದ ನಾಯಕರ ನಡುವೆ ಸಂಭಾಷಣೆಗಳು ನಡೆದವು. ಈ ಚರ್ಚೆಗಳಲ್ಲಿ ಯಾವುದೇ ವ್ಯಾಪಾರದ ವಿಷಯವು ಬರಲಿಲ್ಲ" ಎಂದು ಅವರು ಹೇಳಿದರು.
ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಕುರಿತು ಮಾಹಿತಿ ನೀಡಿದ ಅವರು
ಕೈಗಾರಿಕೆಯನ್ನು ಬೆಳೆಸಿದಂತೆ ಭಾರೀ ಪ್ರಮಾಣದಲ್ಲಿ ಭಯೋತ್ಪಾದನೆಯನ್ನು ಪೋಷಿಸಿರುವ ಪಾಕಿಸ್ತಾನವು, ಅದರ ಪರಿಣಾಮಗಳಿಂದ ತಪ್ಪಿಸಿಕೊಳ್ಳಬಹುದು ಎಂದು ಭಾವಿಸಿದ್ದರೆ ಅದು ಮೂರ್ಖತನ. ಈಗ ಪಾಕಿಸ್ತಾನವು ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಭಾರತೀಯ ಪ್ರದೇಶವನ್ನು ಬಿಟ್ಟುಕೊಡುವುದ ಮಾತ್ರ ನಮ್ಮ ಮುಂದಿರುವ ಏಕೈಕ ವಿಷಯ ಎಂದರು.
ಈ ಹಿಂದೆ ಹೇಳಿದಂತೆ, ಅವರ ಡಿಜಿಎಂಒ ಮತ್ತು ಡಿಜಿಎಂಒ ನಡುವೆ ಮಾತುಕತೆ ನಡೆದಿದೆ. ಕದನ ವಿರಾಮ ಮಾತುಕತೆಗಳನ್ನು ಯಾರು ಪ್ರಾರಂಭಿಸಿದರು ಎಂಬುದನ್ನು ನಾವು ಈಗಾಗಲೇ ಸ್ಪಷ್ಟಪಡಿಸಿದ್ದೇವೆ ಎಂದು ರಣಧೀರ್ ಜೈಸ್ವಾಲ್ ಮಾಹಿತಿ ನೀಡಿದರು.







