ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ | ಕರುಣ್ ನಾಯರ್ ಶತಕ, ವಿದರ್ಭ 264/6

ಕರುಣ್ ನಾಯರ್ | PC : ANI
ನಾಗ್ಪುರ: ಭರ್ಜರಿ ಫಾರ್ಮ್ನಲ್ಲಿರುವ ಕರುಣ್ ನಾಯರ್ ಸಿಡಿಸಿದ ಅಜೇಯ ಶತಕದ ನೆರವಿನಿಂದ ಶನಿವಾರ ಆರಂಭವಾದ ರಣಜಿ ಟ್ರೋಫಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಆತಿಥೇಯ ವಿದರ್ಭ ತಂಡವು ತಮಿಳುನಾಡು ತಂಡದ ವಿರುದ್ಧ ಉತ್ತಮ ಆರಂಭ ಪಡೆದಿದೆ.
ಕರ್ನಾಟಕದ 33ರ ಹರೆಯದ ಆಟಗಾರ ಕರುಣ್ ನಾಯರ್ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ತನ್ನ 22ನೇ ಶತಕ ಗಳಿಸಿ ತನ್ನ ಶ್ರೇಷ್ಠ ಪ್ರದರ್ಶನ ಮುಂದುವರಿಸಿದರು. ನಾಯರ್ ಹೈದರಾಬಾದ್ ವಿರುದ್ಧ ರಣಜಿಯಲ್ಲಿ ಶತಕ ಗಳಿಸಿದ್ದಲ್ಲದೆ, ಇತ್ತೀಚೆಗೆ ವಿಜಯ್ ಹಝಾರೆ ಟ್ರೋಫಿಯಲ್ಲಿ ಸತತ 4 ಶತಕಗಳನ್ನು ಸಿಡಿಸಿ ಗಮನ ಸೆಳೆದಿದ್ದರು.
ನಾಯರ್ 180 ಎಸೆತಗಳಲ್ಲಿ 14 ಬೌಂಡರಿ ಹಾಗೂ 1 ಸಿಕ್ಸರ್ಗಳ ಸಹಿತ ಔಟಾಗದೆ 100 ರನ್ ಗಳಿಸಿದ್ದಾರೆ.
ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದ ವಿದರ್ಭ ತಂಡವು 44 ರನ್ಗೆ 3 ವಿಕೆಟ್ಗಳನ್ನು ಕಳೆದುಕೊಂಡಿತ್ತು. ಆಗ ದಾನಿಶ್ ಮಾಲೆವರ್(75 ರನ್) ಅವರೊಂದಿಗೆ ಕೈಜೋಡಿಸಿದ ನಾಯರ್ ಇನಿಂಗ್ಸ್ ಆಧರಿಸಿದರು. ಈ ಜೋಡಿ 4ನೇ ವಿಕೆಟ್ಗೆ 98 ರನ್ ಜೊತೆಯಾಟ ನಡೆಸಿತು. ದಾನಿಶ್ ಔಟಾದ ನಂತರ ಅಕ್ಷಯ್ ವಾಡ್ಕರ್(24 ರನ್)ಅವರೊಂದಿಗೆ 64 ರನ್ ಜೊತೆಯಾಟ ನಡೆಸಿದರು.
ಸಾಯಿ ಕಿಶೋರ್ ಬೌಲಿಂಗ್ನಲ್ಲಿ ಬೌಂಡರಿ ಗಳಿಸಿ ತನ್ನ ಅರ್ಧಶತಕ ಪೂರೈಸಿದ ನಾಯರ್, 86ನೇ ಓವರ್ನಲ್ಲಿ ಅಜಿತ್ ರಾಮ್ ಬೌಲಿಂಗ್ನಲ್ಲಿ ಒಂಟಿ ರನ್ ಗಳಿಸಿ ಶತಕ ಪೂರ್ಣಗೊಳಿಸಿದರು.
ತಮಿಳುನಾಡು ಪರ ಬೌಲಿಂಗ್ನಲ್ಲಿ ವಿಜಯ್ ಶಂಕರ್(2-50)ಯಶಸ್ವಿ ಪ್ರದರ್ಶನ ನೀಡಿದರು.
►ನಿಧೀಶ್ಗೆ ಐದು ವಿಕೆಟ್, ಕೇರಳ ವಿರುದ್ಧ ಕಾಶ್ಮೀರ 228/8
ಎಂ.ಡಿ. ನಿಧೀಶ್(5/56) ಐದು ವಿಕೆಟ್ ಗೊಂಚಲು ನೆರವಿನಿಂದ ಕೇರಳ ತಂಡವು ಶನಿವಾರ ಆರಂಭವಾದ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜಮ್ಮು-ಕಾಶ್ಮೀರ ತಂಡವನ್ನು 8 ವಿಕೆಟ್ಗಳ ನಷ್ಟಕ್ಕೆ 228 ರನ್ಗೆ ನಿಯಂತ್ರಿಸಿದೆ.
ಟಾಸ್ ಜಯಿಸಿ ಫೀಲ್ಡಿಂಗ್ ಆಯ್ದುಕೊಂಡಿರುವ ಕೇರಳ ತಂಡದ ಪರ ನಿಧೀಶ್ 56 ರನ್ಗೆ 5 ವಿಕೆಟ್ಗಳನ್ನು ಪಡೆದು ಜಮ್ಮು-ಕಾಶ್ಮೀರದ ಬ್ಯಾಟಿಂಗ್ ಸರದಿಯನ್ನು ನಿರಂತರವಾಗಿ ಕಾಡಿದರು.
ನಿಧೀಶ್ ಬೌಲಿಂಗ್ಗೆ ಆರಂಭಿಕ ಆಟಗಾರರಾದ ಶುಭಮ್ ಖಜುರಿಯಾ, ಹಸನ್, ವಿವ್ರಾಂತ್ ಶರ್ಮಾ, ವಿಕೆಟ್ಕೀಪರ್ ಕನ್ಹಯ್ಯಾ ವಾಧ್ವಾನ್ ಹಾಗೂ ನಾಸಿರ್ ಮುಝಾಫ್ಫರ್ ಔಟಾದರು.
ಕಾಶ್ಮೀರದ ಪರ ಕನ್ಹಯ್ಯಾ(48 ರನ್, 80 ಎಸೆತ)ಸರ್ವಾಧಿಕ ಸ್ಕೋರ್ ಗಳಿಸಿದರು. ಮುಝಾಫ್ಫರ್ 44 ರನ್ ಕೊಡುಗೆ ನೀಡಿದರು.
►ಮುಂಬೈಗೆ ಆಸರೆಯಾದ ಶಮ್ಸ್ ಮುಲಾನಿ, ತನುಷ್ ಕೋಟ್ಯಾನ್
ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಹರ್ಯಾಣದ ಬೌಲಿಂಗ್ ದಾಳಿಗೆ ತತ್ತರಿಸಿ ಆರಂಭಿಕ ಕುಸಿತ ಕಂಡಿದ್ದ ಮುಂಬೈ ತಂಡವು ಶಮ್ಸ್ ಮುಲಾನಿ(91 ರನ್, 178 ಎಸೆತ) ಹಾಗೂ ತನುಷ್ ಕೋಟ್ಯಾನ್(ಔಟಾಗದೆ 85, 154 ಎಸೆತ) ಅವರ ಸಾಹಸದಿಂದ ಪ್ರತಿ ಹೋರಾಟ ನೀಡಿದೆ.
ಮುಂಬೈ ತಂಡವು ಒಂದು ಹಂತದಲ್ಲಿ 30 ಓವರ್ನೊಳಗೆ 113 ರನ್ಗೆ 7 ವಿಕೆಟ್ಗಳನ್ನು ಕಳೆದುಕೊಂಡಿತ್ತು. ಆಗ ಜೊತೆಯಾದ ಶಮ್ಸ್ ಮುಲಾನಿ ಹಾಗೂ ತನುಷ್ ಕೋಟ್ಯಾನ್ 8ನೇ ವಿಕೆಟ್ಗೆ 165 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು.
ಮುಂಬೈ ತಂಡವು ಮೊದಲ ದಿನದಾಟದಂತ್ಯಕ್ಕೆ 8 ವಿಕೆಟ್ಗಳ ನಷ್ಟಕ್ಕೆ 278 ರನ್ ಗಳಿಸಿದೆ.
ಹರ್ಯಾಣದ ಪರ ಅನ್ಶುಲ್ ಕಾಂಬೋಜ್(3-58) ಹಾಗೂ ಸುಮಿತ್ ಕುಮಾರ್(2-57)ಐದು ವಿಕೆಟ್ಗಳನ್ನು ಹಂಚಿಕೊಂಡರು.







