ಕಟಕ್ | ಸಂತ್ರಸ್ತೆಯನ್ನು ವಿವಾಹವಾಗಲು ಒಂದು ತಿಂಗಳು ಜಾಮೀನು ಪಡೆದ ಅತ್ಯಾಚಾರ ಆರೋಪಿ!

ಸಾಂದರ್ಭಿಕ ಚಿತ್ರ | PC : PTI
ಕಟಕ್ : ಸಂತ್ರಸ್ತೆ ಯುವತಿಯನ್ನು ವಿವಾಹವಾಗುವ ಸಲುವಾಗಿ ಒಡಿಶಾ ಹೈಕೋರ್ಟ್ 26 ವರ್ಷದ ಅತ್ಯಾಚಾರ ಆರೋಪಿಗೆ ಒಂದು ತಿಂಗಳ ಕಾಲ ಜಾಮೀನು ಮಂಜೂರು ಮಾಡಿದೆ.
ಈಗ ಯುವತಿಗೆ 22 ವರ್ಷ ವಯಸ್ಸಾಗಿದ್ದು, ಆಕೆ 16ನೇ ವರ್ಷದವಳಿದ್ದಾಗ ಅತ್ಯಾಚಾರ ಎಸಗಿದ್ದಾಗಿ ಆಪಾದಿಸಲಾಗಿತ್ತು. ಆದರೆ ಇವರ ಸಂಬಂಧ ಪರಸ್ಪರ ಒಪ್ಪಿತ ಸಂಬಂಧವಾಗಿದ್ದು, ಯಾವುದೇ ಬಲವಂತದ ಅಥವಾ ಶೋಷಣಾತ್ಮಕ ಸಂಬಂಧ ಅಲ್ಲ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್ ಆರೋಪಿಗೆ ಸಂತ್ರಸ್ತೆಯನ್ನು ವಿವಾಹವಾಗಲು ಒಂದು ತಿಂಗಳ ಜಾಮೀನು ನೀಡಿದೆ.
"ಕಾನೂನಾತ್ಮಕ ಚೌಕಟ್ಟಿನಲ್ಲಿ ಆರೋಪಗಳು ಗಂಭೀರ ಸ್ವರೂಪದ್ದಾಗಿದ್ದರೂ, ಇಬ್ಬರು ವ್ಯಕ್ತಿಗಳ ನಡುವಿನ ಸಹಮತದ ಸಂಬಂಧವಾಗಿರುವ ಹಿನ್ನೆಲೆಯಲ್ಲಿ ಮತ್ತು ಹೆಚ್ಚಿನ ವಯಸ್ಸಿನ ಅಂತರ ಇಲ್ಲದ ಕಾರಣ ಮತ್ತು ಪ್ರಸ್ತುತ ಪ್ರಕರಣ ದಾಖಲಿಸುವ ಮುನ್ನ ವೈಯಕ್ತಿಕ ಬಂಧವನ್ನು ಹೊಂದಿದ್ದರು" ಎಂದು ನ್ಯಾಯಮೂರ್ತಿ ಎಸ್.ಕೆ.ಪಾಣಿಗ್ರಾಹಿ ಸೋಮವಾರ ಅಪ್ಲೋಡ್ ಮಾಡಲಾದ ಜಾಮೀನು ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ವಿವಾಹವಾಗುವ ಭರವಸೆ ನೀಡಿ 2019ರಿಂದೀಚೆಗೆ ತನ್ನ ಜೊತೆ ದೈಹಿಕ ಸಂಪರ್ಕ ಹೊಂದಿದ್ದ ಎಂದು ಆಪಾದಿಸಿ ಯುವತಿ 2023ರಲ್ಲಿ ಪೋಕ್ಸೋ ಕಾಯ್ದೆಯಡಿ ದೂರು ನೀಡಿದ್ದಳು. 2020 ಮತ್ತು 2022ರಲ್ಲಿ ತಾನು ಗರ್ಭಿಣಿಯಾಗಿದ್ದು, ಗರ್ಭಪಾತಕ್ಕೆ ಆರೋಪಿ ಬಲವಂತ ಮಾಡಿದ್ದ ಎಂದು ದೂರಿನಲ್ಲಿ ವಿವರಿಸಿದ್ದಳು.
ದೂರು ನೀಡಿದ ಯುವತಿ ಹಾಗೂ ಆರೋಪಿ ಪರಸ್ಪರ ವಿವಾಹವಾಗಬೇಕು ಎಂದು ಎರಡೂ ಕುಟುಂಬದವರು ನಿರ್ಧರಿಸಿದ್ದಾಗಿ ಮಾಹಿತಿ ನೀಡಿ ಮಧ್ಯಂತರ ಜಾಮೀನಿಗೆ ಅರ್ಜಿ ಸಲ್ಲಿಸಲಾಗಿತ್ತು. ಈ ವ್ಯವಸ್ಥೆಗೆ ಅರ್ಜಿದಾರರು ಒಪ್ಪಿಗೆ ಸೂಚಿಸಿದ್ದು, ಬಿಡುಗಡೆ ಮಾಡಿದ ನಂತರ ವಿವಾಹವಾಗುತ್ತಾನೆ ಎಂದು ಅರ್ಜಿದಾರರ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದರು.







