ಅತ್ಯಾಚಾರ ಪ್ರಕರಣ | ಮಾಂಕ್ಕುಟತ್ತಿಲ್ ಗೆ ಬಂಧನದಿಂದ ಮಧ್ಯಂತರ ರಕ್ಷಣೆ

ರಾಹುಲ್ ಮಾಂಕ್ಕುಟತ್ತಿಲ್ | Photo Credit : Rahul Mamkootathil \ instagram.com
ಹೊಸದಿಲ್ಲಿ, ಡಿ. 6: ಅತ್ಯಾಚಾರ ಪ್ರಕರಣದಲ್ಲಿ ಪಾಲಕ್ಕಾಡ್ ಶಾಸಕ ರಾಹುಲ್ ಮಾಂಕ್ಕುಟತ್ತಿಲ್ ಗೆ ಕೇರಳ ಉಚ್ಚ ನ್ಯಾಯಾಲಯ ಶನಿವಾರ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿದೆ.
ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಮಾಂಕ್ಕುಟತ್ತಿಲ್ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ. ಬಾಬು ಈ ಆದೇಶ ನೀಡಿದ್ದಾರೆ.
ಮಾಂಕ್ಕುಟತ್ತಿಲ್ ಅವರ ಅರ್ಜಿಯನ್ನು ಡಿಸೆಂಬರ್ 15ರಂದು ಆಲಿಸಲಾಗುವುದು. ಅಲ್ಲಿಯವರೆಗೆ ಅವರನ್ನು ಬಂಧಿಸಬಾರದು ಎಂದು ನ್ಯಾಯಾಲಯ ಹೇಳಿದೆ.
ಈ ಪ್ರಕರಣದಲ್ಲಿ ತಿರುವನಂತಪುರದ ಸೆಷನ್ಸ್ ನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿತ್ತು. ಅನಂತರ ಅವರು ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಕೇರಳ ಕಾಂಗ್ರೆಸ್ ಮಾಂಕ್ಕುಟತ್ತಿಲ್ ಅವರನ್ನು ಪಕ್ಷದಿಂದ ಗುರುವಾರ ವಜಾಗೊಳಿಸಿತ್ತು.
ಮಹಿಳೆಯೋರ್ವರು ತನ್ನನ್ನು ಮಾಂಕ್ಕುಟತ್ತಿಲ್ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿದ್ದರು. ಅವರು ವಂಚನೆಯ ಮೂಲಕ ತನ್ನ ಒಪ್ಪಿಗೆ ಪಡೆದರು ಹಾಗೂ ಗರ್ಭಪಾತಕ್ಕೆ ಒತ್ತಾಯಿಸಿದರು ಎಂದು ಅವರು ಹೇಳಿದ್ದರು. ಅನಂತರ ನವೆಂಬರ್ 28ರಂದು ಅವರ ವಿರುದ್ಧ ಪ್ರಕರಣ ದಾಖಲಾಯಿತು.
ಮಾಂಕ್ಕುಟತ್ತಿಲ್ ವಿರುದ್ಧ ನಿಂದನೆ, ದೂರದಾರರಿಗೆ ಜೀವ ಬೆದರಿಕೆ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ದುರ್ಬಳಕೆ ಆರೋಪ ಮಾಡಲಾಗಿದೆ.
ಮಂಗಳವಾರ ಇನ್ನೋರ್ವ ಮಹಿಳೆ ಮಾಂಕ್ಕುಟತ್ತಿಲ್ ತನಗೆ 2023ರಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಅವರು ಕಾಂಗ್ರೆಸ್ ನ ರಾಜ್ಯ ನಾಯಕತ್ವಕ್ಕೆ ಇಮೇಲ್ ಮೂಲಕ ದೂರು ನೀಡಿದ್ದರು.
ಈ ದೂರನ್ನು ಪೊಲೀಸರಿಗೆ ಹಸ್ತಾಂತರಿಸಲಾಗಿತ್ತು. ಈ ದೂರಿನ ಹಿನ್ನೆಲೆಯಲ್ಲಿ ಮಾಂಕ್ಕುಟತ್ತಿಲ್ ವಿರುದ್ಧ ಎರಡನೇ ಎಫ್ಐಆರ್ ದಾಖಲಿಸಲಾಗಿದೆ.







