ಬಾಲಕಿಯ ಅತ್ಯಾಚಾರ| 40 ದಿನಗಳೊಳಗೆ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿ ಅಪರಾಧಿಗೆ ಮರಣದಂಡನೆ ಶಿಕ್ಷೆ ವಿಧಿಸಿದ ನ್ಯಾಯಾಲಯ

ಸಾಂದರ್ಭಿಕ ಚಿತ್ರ | Photo Credit : freepik
ಅಹ್ಮದಾಬಾದ್,ಜ.17:ತೀರಾ ಅಪರೂಪವೆಂಬಂತೆ ರಾಜ್ಕೋಟ್ನ ವಿಶೇಷ ನ್ಯಾಯಾಲಯವು ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪಿಗೆ ವಿಚಾರಣೆ ನಡೆಸಿದ ಕೇವಲ 40 ದಿನಗಳೊಳಗೆ ಮರಣದಂಡನೆಯನ್ನು ಘೋಷಿಸುವ ಮೂಲಕ ಅತ್ಯಂತ ತ್ವರಿತವಾಗಿ ತೀರ್ಪು ನೀಡಿದೆ.
ಎಫ್ಐಆರ್ನಿಂದ ಮರಣದಂಡನೆ ತೀರ್ಪು ನೀಡುವ ತನಕ ಇಡೀ ಕಾನೂನು ಪ್ರಕ್ರಿಯೆಯನ್ನು ಕೇವಲ 40 ದಿನಗಳೊಳಗೆ ಪೂರ್ಣಗೊಳಿಸುವ ಮೂಲಕ, ನ್ಯಾಯಾಲಯವು ಮಕ್ಕಳ ಮೇಲಿನ ಅಪರಾಧಗಳ ವಿರುದ್ಧ ಕಠಿಣವಾದ ಎಚ್ಚರಿಕೆಯನ್ನು ನೀಡಿದೆ.
ಏಳು ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಅಪರಾಧಿ 30 ವರ್ಷದ ರಮೇಶ್ ದುಡ್ವಾಗೆ ಮರಣದಂಡನೆ ವಿಧಿಸಿ ತೀರ್ಪು ನೀಡಿದ ನ್ಯಾಯಾಧೀಶರು, ಇದೊಂದು ಅತ್ಯಂತ ಕ್ರೂರ, ಹೇಯವಾದ ಅಪರಾಧವಾಗಿದೆ ಎಂದರು ಮತ್ತು ‘ನಿರ್ಭಯಾ’ ಪ್ರಕರಣದ ಜೊತೆಗಿರುವ ಸಾಮ್ಯತೆಗ ಬಗ್ಗೆ ಗಮನಸೆಳೆದರು.
ರಾಜ್ಕೋಟ್ ಜಿಲ್ಲೆಯ ಕಾನಪಾರ್ ಗ್ರಾಮದ ಹೊರವಲಯದಲ್ಲಿ 2025ರ ಡಿಸೆಂಬರ್ 4 ರಂದು ಈ ಹೇಯಕೃತ್ಯ ನಡೆದಿತ್ತು. ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಬಾಲಕಿಯು ತೋಟವೊಂದರಲ್ಲಿ ತನ್ನ ಒಡಹುಟ್ಟಿದವರೊಂದಿಗೆ ಆಟವಾಡುತ್ತಿದ್ದಾಗ ಮೋಟಾರ್ಸೈಕಲ್ನಲ್ಲಿ ಬಂದ ಆರೋಪಿಯು ಆಕೆಯನ್ನು ಎಳೆದುಕೊಂಡು ಹೋಗಿ, ಮರವೊಂದರ ಪಕ್ಕದಲ್ಲಿರುವ ಪೊದೆಯಲ್ಲಿ ಅತ್ಯಾಚಾರವೆಸಗಿದ್ದ ಮತ್ತು ಆಕೆಯ ಖಾಸಗಿ ಭಾಗಕ್ಕೆ ಕಬ್ಬಿಣದ ರಾಡ್ ತೂರಿಸಿ ವಿಕೃತಿ ಮೆರೆದಿದ್ದ. ಇದರಿಂದಾಗಿ ಬಾಲಕಿಗೆ ತೀವ್ರವಾದ ರಕ್ತಸ್ರಾವವಾಗಿತ್ತು.
ಬಾಲಕಿಯನ್ನು ಕಾನಂಪಾರ್ ಗ್ರಾಮದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಆಕೆಯ ಪರಿಸ್ಥಿತಿ ಗಂಭೀರವಾಗಿದ್ದರಿಂದ ಜಸ್ದಾನ್ ಸರಕಾರಿ ಆಸ್ಪತ್ರೆಗೆ, ಆನಂತರ ರಾಜಕೋಟ್ ಜನತಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಿಸ್ತೃತವಾದ ವೈದ್ಯಕೀಯ ಚಿಕಿತ್ಸೆಯ ಬಳಿಕ ಬಾಲಕಿಯು ಬದಕುಳಿದಿದ್ದಳು.
ಪ್ರಕರಣದ ಪ್ರಾಥಮಿಕ ತನಿಖೆ ನಡೆಸಿದ ಪೊಲೀಸರು ಆನಂತರ ಸಂದೇಹದ ಮೇರೆ ರೇಮ್ಸಿನ್ಹ ದುಡ್ಡಾವನ್ನುನನ್ನು ಬಂಧಿಸಿದ್ದರು. ತನಿಖೆಯನ್ನು ಪೂರ್ಣಗೊಳಿಸಿದ ಪೊಲೀಸರು, ಎಫ್ಐಆರ್ ಸಲ್ಲಿಕೆಯಾದ 11 ದಿನಗಳೊಳಗೆ ದೋಷಾರೋಪಪಟ್ಟಿಯನ್ನು ಸಲ್ಲಿಸಿದ್ದರು.







