ಕೇರಳ| ಅತ್ಯಾಚಾರ ಆರೋಪ: ಶಾಸಕ ರಾಹುಲ್ ಮಾಂಕೂಟತ್ತಿಲ್ ವಿರುದ್ಧ ಪ್ರಕರಣ ದಾಖಲು

Photo | indiatoday
ತಿರುವನಂತಪುರಂ : ಕೇರಳದ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ವಿರುದ್ಧ ಮಹಿಳೆಯೊಬ್ಬರು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ದೂರು ನೀಡಿದ ಬೆನ್ನಲ್ಲೆ ಅವರ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ.
ಮಹಿಳೆ ಮತ್ತು ರಾಹುಲ್ ಮಾಂಕೂಟತ್ತಿಲ್ ನಡುವಿನ ಸಂಭಾಷಣೆಯ ಆಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿತ್ತು. ಆ ಬಳಿಕ ಮಹಿಳೆ ಸಿಎಂಗೆ ದೂರು ನೀಡಿದ್ದರು. ಈ ಕುರಿತ ದೂರನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ಅಗತ್ಯ ಕ್ರಮಕ್ಕಾಗಿ ರವಾನಿಸಿದ್ದರು.
ಇದೀಗ ರಾಹುಲ್ ಮಾಂಕೂಟತ್ತಿಲ್ ವಿರುದ್ಧ ಅತ್ಯಾಚಾರ ಮತ್ತು ಗರ್ಭಪಾತಕ್ಕೆ ಒತ್ತಾಯಿಸಿದ ಆರೋಪದಲ್ಲಿ ಪ್ರಕರಣ ದಾಖಲಿಸಲಾಗಿದೆ.
ರಾಹುಲ್ ಮಾಂಕೂಟತ್ತಿಲ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದ ಒಂದು ತಿಂಗಳ ನಂತರ ಈ ಬೆಳವಣಿಗೆ ಸಂಭವಿಸಿದೆ. ಹೊಸ ಆಡಿಯೋ ಕ್ಲಿಪ್ ಮತ್ತು ಸ್ಕ್ರೀನ್ಶಾಟ್ಗಳು ವೈರಲ್ ಬಳಿಕ ಶಾಸಕರ ವಿರುದ್ಧ ಕ್ರಮಕ್ಕೆ ಆಗ್ರಹ ವ್ಯಕ್ತವಾಗಿದ್ದವು.
ದೂರು ದಾಖಲು ಬಳಿಕ ಫೇಸ್ ಬುಕ್ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಮಾಂಕೂಟತ್ತಿಲ್, ನಾನು ಯಾವುದೇ ತಪ್ಪು ಮಾಡಿಲ್ಲ, ನಾನು ಕಾನೂನುಬದ್ಧವಾಗಿ ಹೋರಾಡುವುದನ್ನು ಮುಂದುವರಿಸುತ್ತೇನೆ. ನ್ಯಾಯಾಲಯದಲ್ಲಿ ಮತ್ತು ಜನರ ನ್ಯಾಯಾಲಯದಲ್ಲಿ ಎಲ್ಲವನ್ನೂ ಸಾಬೀತುಪಡಿಸುತ್ತೇನೆ. ಸತ್ಯ ಗೆಲ್ಲುತ್ತದೆ ಎಂದು ಹೇಳಿದ್ದಾರೆ.
ಲೈಂಗಿಕ ದೌರ್ಜನ್ಯದ ಆರೋಪಗಳ ನಂತರ ಆಗಸ್ಟ್ 25 ರಂದು ರಾಹುಲ್ ಮಾಂಕೂಟತ್ತಿಲ್ ಅವರನ್ನು ಕಾಂಗ್ರೆಸ್ನ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಲಾಗಿತ್ತು. ಆ ಬಳಿಕ ಅವರು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.







