ಮೂರೂವರೆ ವರ್ಷದ ಬಾಲಕಿ ಮೇಲೆ ಅತ್ಯಾಚಾರ; ಆರೋಪಿ ಮದನ್ ಲಾಲ್ ಬಂಧನ

ಜೈಪುರ: ಮೂರೂವರೆ ವರ್ಷದ ಕಿಂಡರ್ ಗಾರ್ಟನ್ ವಿದ್ಯಾರ್ಥಿನಿ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ ಆರೋಪದಲ್ಲಿ ಶಾಲಾ ಬಸ್ ನ ನಿರ್ವಾಹಕೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಯಾರಿಗಾದರೂ ತಿಳಿಸಿದಲ್ಲಿ ತಂದೆ-ತಾಯಿ ಸಾಯಬೇಕಾಗುತ್ತದೆ ಎಂದು ಪುಟ್ಟ ಬಾಲಕಿಗೆ ಬೆದರಿಕೆ ಹಾಕಿದ್ದ ಎನ್ನಲಾಗಿದೆ.
ಪ್ರಕರಣದ ಸಂಬಂಧ ಆರೋಪಿ ಮದನ್ ಲಾಲ್ (34) ಎಂಬಾತನನ್ನು ಬಂಧಿಸಲಾಗಿದೆ. ಚಾಲಕ ಕಮಲ್ ಮತ್ತು ಬಸ್ಸಿನ ಮಹಿಳಾ ಸಹಾಯಕಿ ಪೂಜಾ ಕೂಡಾ ಅತ್ಯಾಚಾರದ ವೇಳೆ ಹಾಜರಿದ್ದರು ಎನ್ನಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಬಾಲಕಿಯ ಗುಪ್ತಾಂಗ ಬಾತುಕೊಂಡಿರುವುದನ್ನು ತಾಯಿ ಗಮನಿಸಿದ್ದು, ಈ ಬಗ್ಗೆ ಬಾಲಕಿಯನ್ನು ವಿಚಾರಿಸಿದಾಗ ಬಾಲಕಿ ತನ್ನ ಮೇಲೆ ಲೈಂಗಿಕ ಹಲ್ಲೆ ನಡೆದದ್ದನ್ನು ಬಹಿರಂಗಪಡಿಸಿದಳು ಎಂದು ಪೊಲೀಸರು ವಿವರಿಸಿದ್ದಾರೆ. ಬಾಲಕಿ ತನ್ನ ಮೇಲೆ ನಡೆದ ದೌರ್ಜನ್ಯವನ್ನು ವಿವರಿಸುವ ವಿಡಿಯೊವನ್ನು ತಾಯಿ ದಾಖಲಿಸಿ ಪೊಲೀಸರಿಗೆ ನೀಡಿದ್ದು, ಇದರ ಆಧಾರದಲ್ಲಿ ಮದನ್ ಲಾಲ್ ನನ್ನು ಬಂಧಿಸಲಾಗಿದೆ.
ಮಗು ತನ್ನ ಶಿಕ್ಷಕಿಗೆ ಕೂಡಾ ಈ ಬಗ್ಗೆ ಮಾಹಿತಿ ನೀಡಿದ್ದಳು. ಆಗ ಶಿಕ್ಷಕಿ ಬಾಲಕಿಯನ್ನು ಬೈದು ಊಟ ಮುಗಿಸುವಂತೆ ಸೂಚಿಸಿದರು ಎಂದು ಮಗುವಿನ ತಾಯಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.
ಬಾಲಕಿ ಶಾಲೆಗೆ ಬರಲು ಆರಂಭಿಸಿದಾಗಿನಿಂದ ಆರೋಪಿಗೆ ಬಾಲಕಿಯ ಪರಿಚಯ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕಿಯ ಜತೆ ಮದನ್ಲಾಲ್ ಇದ್ದ ಫೋಟೊ ಪೊಲೀಸರಿಗೆ ಲಭ್ಯವಾಗಿದೆ.







