ರಶ್ಮಿಕಾ ಡೀಪ್ ಫೇಕ್ ವಿಡಿಯೋ ಪ್ರಕರಣ ಮೂವರ ಬಂಧನ , ಇನ್ನೊಬ್ಬನಿಗಾಗಿ ಶೋಧ

ರಶ್ಮಿಕಾ ಮಂದಣ್ಣ | PHOTO: PTI
ಹೊಸದಿಲ್ಲಿ: ಚಿತ್ರನಟಿ ರಶ್ಮಿಕಾ ಮಂದಣ್ಣ ಅವರ ಡೀಪ್ಫೇಕ್ ವಿಡಿಯೋವನ್ನು ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆನ್ನಲಾದ ನಾಲ್ವರು ಆರೋಪಿಗಳನ್ನು ಪತ್ತೆಹಚ್ಚಲಾಗಿದ್ದು, ಇನ್ನೋರ್ವ ಮುಖ್ಯ ಸಂಚುಕೋರನಿಗಾಗಿ ಶೋಧಕಾರ್ಯಾಚರಣೆ ನಡೆಯುತ್ತಿದೆ ಎಂದು ದಿಲ್ಲಿ ಪೊಲೀಸರು ಬುಧವಾರ ತಿಳಿಸಿದ್ದಾರೆ.
ಆದಾಗ್ಯೂ, ನಾಲ್ವರು ಶಂಕಿತ ಆರೋಪಿಗಳು ಡೀಪ್ಫೇಕ್ ವಿಡಿಯೋದ ಅಪ್ಲೋಡರ್ಗಳೇ ಹೊರತು ಸೃಷ್ಟಿಕರ್ತರಲ್ಲರೆಂದು ಪೊಲೀಸರು ಹೇಳಿದ್ದಾರೆ. ಈ ಪ್ರಕರಣದ ಪ್ರಮುಖ ಸಂಚುಕೋರನಿಗಾಗಿ ತಾವು ಹುಡುಕಾಡುತ್ತಿರುವುದಾಗಿ ಅವರು ಹೇಳಿದ್ದಾರೆ.
ಮೆಟಾ ಒದಗಿಸಿದ ವಿವರಗಳನ್ನು ಆಧರಿಸಿ ನಾಲ್ವರು ಶಂಕಿತ ಆರೋಪಿಗಳ ಪೈಕಿ ಮೂವರನ್ನು ಬಂಧಿಸಲಾಗಿದೆ ಎಂದವರು ಹೇಳಿದರು. ಮೆಟಾ ಸಂಸ್ಥೆಯು ಫೇಸ್ಬುಕ್, ಇನ್ಸ್ಟಾಗ್ರಾಂ ಹಾಗೂ ವಾಟ್ಸಾಪ್ನಂತಹ ಸಾಮಾಜಿಕ ಜಾಲತಾಣ ವೇದಿಕೆಗಳ ಮಾಲಕತ್ವವನ್ನು ಹೊಂದಿದೆ.
ನವೆಂಬರ್ 6ರಂದು ರಶ್ಮಿಕಾ ಮಂದಣ್ಣ ಅವರ ತಿರುಚಿಲ್ಪಟ್ಟ ವೀಡಿಯೊ ಆನ್ಲೈನ್ನಲ್ಲಿ ಪ್ರಸಾರವಾಗಿದ್ದು, ಡಿಜಿಟಲ್ ಸುರಕ್ಷತೆಯ ಬಗ್ಗೆ ಭಾರೀ ವಿವಾದದ ಕಿಡಿಯನ್ನು ಹೊತ್ತಿಸಿತ್ತು.





