2024-25ರಲ್ಲಿ 500 ರೂ.ಗಳ 1.12 ಲಕ್ಷ ನಕಲಿ ನೋಟುಗಳು ಪತ್ತೆ: ಆರ್ಬಿಐ

Photo credit: PTI
ಹೊಸದಿಲ್ಲಿ: ಆರ್ಬಿಐ ಗವರ್ನರ್ ಸಂಜಯ ಮಲ್ಹೋತ್ರಾ ಅವರು ಗುರುವಾರ ಹಣಕಾಸು ಕುರಿತು ಸಂಸದೀಯ ಸಮಿತಿಯ ಮುಂದೆ ಹಾಜರಾದ ಸಂದರ್ಭದಲ್ಲಿ 2024-25ರ ಅವಧಿಯಲ್ಲಿ 500 ರೂ.ಮುಖಬೆಲೆಯ 1.12 ಲಕ್ಷ ನಕಲಿ ನೋಟುಗಳು ಪತ್ತೆಯಾಗಿವೆ ಎಂಬ ಸಂಸದರೋರ್ವರ ಹೇಳಿಕೆಯನ್ನು ಒಪ್ಪಿಕೊಂಡರು ಎಂದು thewire.in ವರದಿ ಮಾಡಿದೆ.
2024-25ರಲ್ಲಿ 500 ರೂ.ಮುಖಬೆಲೆಯ ನಕಲಿ ನೋಟುಗಳ ಸಂಖ್ಯೆಯಲ್ಲಿ ವಾರ್ಷಿಕ ಶೇ.37ಕ್ಕೂ ಅಧಿಕ ಏರಿಕೆಯಾಗಿದ್ದು 1.18 ಲಕ್ಷಕ್ಕೆ ತಲುಪಿದೆ ಎಂದು ಆರ್ಬಿಐ ತನ್ನ ವಾರ್ಷಿಕ ವರದಿಯಲ್ಲಿ ಹೇಳಿತ್ತು. ಇದು ಸಂಸದರು ಸಭೆಯಲ್ಲಿ ಎತ್ತಿ ತೋರಿಸಿದ್ದ 1.12 ಲಕ್ಷಕ್ಕಿಂತ ಅಧಿಕವಾಗಿದೆ. ಅತ್ಯಂತ ಹೆಚ್ಚಿನ ನಕಲಿ ನೋಟುಗಳು 500 ರೂ.ಮುಖಬೆಲೆಯದ್ದಾಗಿವೆ.
2,000 ರೂ.ನೋಟುಗಳು ಈಗ ಚಲಾವಣೆಯಲ್ಲಿ ಇಲ್ಲದಿದ್ದರೂ ಅವುಗಳನ್ನು ಅಮಾನ್ಯಗೊಳಿಸಲಾಗಿಲ್ಲ ಮತ್ತು ಅವು ಕಾನೂನುಬದ್ಧವಾಗಿ ಚಲಾವಣೆಯಲ್ಲಿ ಉಳಿದಿವೆ ಎಂದು ಮಲ್ಹೋತ್ರಾ ಬಿಜೆಪಿ ಸಂಸದ ಭರ್ತೃಹರಿ ಮಹ್ತಾಬ್ ನೇತೃತ್ವದ ಸಂಸದೀಯ ಸಮಿತಿಗೆ ತಿಳಿಸಿದರು.
ಮೇ ತಿಂಗಳಿನಲ್ಲಿ ಬಿಡುಗಡೆಗೊಂಡ ಆರ್ಬಿಐ ವರದಿಯಂತೆ ಪತ್ತೆಯಾಗಿರುವ ನಕಲಿ ನೋಟುಗಳಲ್ಲಿ 100 ರೂ.(51,069),200 ರೂ.(32,660) ಮತ್ತು 2,000 ರೂ(3,508)ಗಳ ನೋಟುಗಳೂ ಸೇರಿವೆ.
ಒಟ್ಟು ನಕಲಿ ನೋಟುಗಳ ಸಂಖ್ಯೆ 2024-25ರಲ್ಲಿ 2.23 ಲಕ್ಷ ಆಗಿದ್ದರೆ 2023-24ರಲ್ಲಿ 2.18 ಲಕ್ಷ ಆಗಿತ್ತು.
ಸಂಸದೀಯ ಸಮಿತಿ ಸಭೆಯಲ್ಲಿ ಹಲವಾರು ವಿಷಯಗಳನ್ನು ಚರ್ಚಿಸಲಾಗಿದ್ದು,ಪ್ರತಿಪಕ್ಷ ಸದಸ್ಯರು ಆರ್ಬಿಐ ಪಾತ್ರದಲ್ಲಿನ ವಿರೋಧಾಭಾಸಗಳನ್ನು ಪ್ರಶ್ನಿಸಿದ್ದಾರೆ ಎಂದು ವರದಿಯಾಗಿದೆ. ಆರ್ಬಿಐ ಹಿತಾಸಕ್ತಿ ಸಂಘರ್ಷಕ್ಕೆ ಕಾರಣವಾಗುವ ವಿಷಯಗಳನ್ನು ಬಿಟ್ಟು ಬ್ಯಾಂಕುಗಳು ಮತ್ತು ಕೆಲವು ಆಯ್ದ ಕ್ಷೇತ್ರಗಳನ್ನು ನಿಯಂತ್ರಿಸುವ ತನ್ನ ಪ್ರಮುಖ ಕರ್ತವ್ಯದ ಮೇಲೆ ಗಮನವನ್ನು ಕೇಂದ್ರೀಕರಿಸಬೇಕು ಎಂದು ಕಾಂಗ್ರೆಸ್ ಸಂಸದ ಮನೀಷ ತಿವಾರಿಯವರು ಸೂಚಿಸಿದರು ಎನ್ನಲಾಗಿದೆ.
ಸಮಿತಿಯು ಜು.23 ಅಥವಾ 24ರಂದು ಮತ್ತೆ ಸಭೆ ಸೇರಲಿದೆ.







