ಗೌಪ್ಯತೆ ಉಲ್ಲಂಘನೆ: ಮಧ್ಯಪ್ರದೇಶದ ಮತಗಟ್ಟೆಯೊಂದರಲ್ಲಿ ನಾಳೆ (ನ.21) ಮರುಚುನಾವಣೆ
ಸಾಂದರ್ಭಿಕ ಚಿತ್ರ (PTI)
ಭೋಪಾಲ್: ಭಾರತದ ಚುನಾವಣಾ ಆಯೋಗವು ಮಧ್ಯಪ್ರದೇಶದ ಭಿಂಡ್ ಜಿಲ್ಲೆಯ ಅಟರ್ ವಿಧಾನಸಭಾ ಕ್ಷೇತ್ರದ ಮತಗಟ್ಟೆಯಲ್ಲಿ ಮರು ಮತದಾನ ನಡೆಸಲು ಆದೇಶಿಸಿದೆ.
ನವೆಂಬರ್ 17 ರಂದು ಕಿಶುಪುರದ ಬೂತ್ನಲ್ಲಿ ಕೆಲವರು ಮತದಾನದ ವೀಡಿಯೊಗಳನ್ನು ಚಿತ್ರೀಕರಿಸಿ, ಗೌಪ್ಯತೆಯನ್ನು ಉಲ್ಲಂಘಿಸಿದ ಕಾರಣ ಮರು ಮತದಾನಕ್ಕೆ ಆದೇಶಿಸಲಾಗಿದೆ. ಗೌಪ್ಯತೆಯ ಉಲ್ಲಂಘನೆಗಾಗಿ ಮತದಾನ ತಂಡದ ನಾಲ್ವರು ಸದಸ್ಯರನ್ನು ಅಮಾನತುಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮತ್ತು ಚುನಾವಣಾಧಿಕಾರಿ ಸಂಜೀವ್ ಶ್ರೀವಾಸ್ತವ ತಿಳಿಸಿದ್ದಾರೆ.
ನವೆಂಬರ್ 21 ರಂದು (ಮಂಗಳವಾರ) ಕಿಶುಪುರದ ಮತಗಟ್ಟೆ ಸಂಖ್ಯೆ 71ರಲ್ಲಿರುವ ಮತಗಟ್ಟೆ ಸಂಖ್ಯೆ 3ರಲ್ಲಿ ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದ್ದು, ಮತದಾರರ ಮಧ್ಯದ ಬೆರಳಿಗೆ ಶಾಯಿ ಹಾಕಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಮರು ಮತದಾನದ ಆದೇಶವನ್ನು ಜಿಲ್ಲಾ ಚುನಾವಣಾಧಿಕಾರಿಗಳಿಗೆ ನೀಡಲಾಗಿದೆ ಎಂದು ಅವರು ಹೇಳಿದರು.
ಮರು ಮತದಾನದ ಸಮಯದಲ್ಲಿ ಮತದಾರರು ಮೊಬೈಲ್ ಫೋನ್ಗಳನ್ನು ಮತಗಟ್ಟೆಗೆ ಕೊಂಡೊಯ್ಯಲು ಅನುಮತಿಸಲಾಗುವುದಿಲ್ಲ ಮತ್ತು ಮಾದರಿ ನೀತಿ ಸಂಹಿತೆಗೆ ಸಂಬಂಧಿಸಿದ ಎಲ್ಲಾ ನಿಯಮಗಳನ್ನು ಅನುಸರಿಸಲಾಗುವುದು ಎಂದು ಶ್ರೀವಾಸ್ತವ ಹೇಳಿದರು. ಮರುಮತದಾನ ಪ್ರಕ್ರಿಯೆಯನ್ನು ವಿಡಿಯೋ ಚಿತ್ರೀಕರಣ ಮಾಡಲಾಗುವುದು ಎಂದರು.
ಮಧ್ಯಪ್ರದೇಶದ ಎಲ್ಲಾ 230 ವಿಧಾನಸಭಾ ಸ್ಥಾನಗಳಿಗೆ ನವೆಂಬರ್ 17 ರಂದು ಒಂದೇ ಹಂತದಲ್ಲಿ ಮತದಾನ ನಡೆದಿದ್ದು, ಚುನಾವಣಾ ಆಯೋಗದ ಪ್ರಕಾರ ಶೇಕಡಾ 77.15 ರಷ್ಟು ಮತದಾನವಾಗಿದೆ. ಡಿಸೆಂಬರ್ 3 ರಂದು ಮತ ಎಣಿಕೆ ನಡೆಯಲಿದೆ.