ಸಂಸತ್ತಿನಲ್ಲಿ ಎಸ್ಐಆರ್ ಕುರಿತು ಚರ್ಚೆಗೆ ಸಿದ್ಧ: ಕೇಂದ್ರ ಸರ್ಕಾರ

ಕಿರಣ ರಿಜಿಜು |Photo Credit : PTI
ಹೊಸದಿಲ್ಲಿ,ಡಿ.2: ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಕುರಿತು ತಕ್ಷಣದ ಚರ್ಚೆಗೆ ಪ್ರತಿಪಕ್ಷಗಳ ಬೇಡಿಕೆಯನ್ನು ಮಂಗಳವಾರ ತಳ್ಳಿಹಾಕಿದ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು, ಚರ್ಚೆಗೆ ಸರಕಾರವು ಸಿದ್ಧವಾಗಿದೆ. ಆದರೆ ಇದಕ್ಕಾಗಿ ಪ್ರತಿಪಕ್ಷಗಳು ಸಮಯವನ್ನು ನಿಗದಿಗೊಳಿಸುವಂತಿಲ್ಲ ಎಂದು ಹೇಳಿದರು.
ವಿವಾದಾತ್ಮಕ ಎಸ್ಐಆರ್ ಕುರಿತು ತುರ್ತು ಚರ್ಚೆಗೆ ಆಗ್ರಹಿಸಿ ಪ್ರತಿಪಕ್ಷಗಳು ಸಂಸತ್ತಿನ ಉಭಯ ಸದನಗಳಲ್ಲಿ ಪ್ರತಿಭಟನೆಗಳನ್ನು ನಡೆಸುತ್ತಿದ್ದು,ಚಳಿಗಾಲದ ಅಧಿವೇಶನ ಆರಂಭದಲ್ಲಿಯೇ ಕಾವೇರಿದೆ.
ಸದನದ ಪ್ರಮುಖ ಆದ್ಯತೆಯಾಗಿ ಎಸ್ಐಆರ್ ಕುರಿತು ಚರ್ಚೆಯನ್ನು ಕೈಗೆತ್ತಿಕೊಳ್ಳಬೇಕು ಎಂದು ಪ್ರತಿಪಕ್ಷಗಳು ಮಂಗಳವಾರ ರಾಜ್ಯಸಭೆಯಲ್ಲಿ ಆಗ್ರಹಿಸಿದವು. ಆದರೆ ಸರಕಾರವು ನಿರಾಕರಿಸಿದ ಬಳಿಕ ಘೋಷಣೆಗಳನ್ನು ಕೂಗಿದ ಪ್ರತಿಪಕ್ಷಗಳ ಸದಸ್ಯರು ಸಭಾತ್ಯಾಗವನ್ನು ನಡೆಸಿದರು.
ಎಸ್ಐಆರ್ನಿಂದಾಗಿ ಜನರು ಸಾಯುತ್ತಿದ್ದಾರೆ ಎಂದು ಟಿಎಂಸಿ ನಾಯಕ ಡೆರೆಕ್ ಒ’ಬ್ರಿಯೆನ್ ಹೇಳಿದರು. ಆದರೆ ರಿಜಿಜು ಅವರು,‘ವಂದೇ ಮಾತರಂ ಕುರಿತು ನಿಗದಿತ ಚರ್ಚೆಯು ಮೊದಲು ನಡೆಯಲಿದೆ. ವಂದೇ ಮಾತರಂ ನಮ್ಮ ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದ ವಿಷಯವಾಗಿದೆ’ ಎಂದು ಸಮರ್ಥಿಸಿಕೊಂಡರು.
ಮೇಲ್ಮನೆಯಲ್ಲಿ ಎಸ್ಐಆರ್ ಕುರಿತು ತಕ್ಷಣ ಚರ್ಚೆ ನಡೆಸಬೇಕು ಎಂಬ ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಆಗ್ರಹಕ್ಕೆ ಪ್ರತಿಕ್ರಿಯಿಸಿದ ರಿಜಿಜು, ದಯವಿಟ್ಟು ಯಾವುದಕ್ಕೂ ಕಾಲಮಿತಿಯ ಷರತ್ತು ಹಾಕಬೇಡಿ ಎಂದು ಹೇಳಿದರು. ಸದನವು ಈ ವಿಷಯವನ್ನು ಕೈಗೆತ್ತಿಕೊಳ್ಳುವ ಮುನ್ನ ವಿವಿಧ ಪಕ್ಷಗಳ ನಾಯಕರೊಂದಿಗೆ ‘ಔಪಚಾರಿಕವಾಗಿ ಅಥವಾ ಅನೌಪಚಾರಿಕವಾಗಿ’ ಸಮಾಲೋಚನೆಗಳನ್ನು ನಡೆಸಲಾಗುವುದು ಎಂದರು.
ಸಂಸತ್ತು ಸಂವಾದದ ಮೂಲಕ ಕಾರ್ಯ ನಿರ್ವಹಿಸಬೇಕು ಎಂದು ಒತ್ತಿ ಹೇಳಿದ ಅವರು, ‘ನೀವು ಸಮಯವನ್ನು ಪ್ರಶ್ನಿಸತೊಡಗಿದಾಗ ಸಮಸ್ಯೆಯು ಆರಂಭವಾಗುತ್ತದೆ. ಪ್ರತಿಯೊಂದೂ ಯಾಂತ್ರಿಕವಾಗಿರಲು ಸಾಧ್ಯವಿಲ್ಲ. ಸಂಸದೀಯ ಪ್ರಜಾಪ್ರಭುತ್ವದಲ್ಲಿ ನಾವು ಸಂವಾದಗಳಲ್ಲಿ,ಚರ್ಚೆಗಳಲ್ಲಿ ತೊಡಗಿಕೊಳ್ಳಬೇಕು’ ಎಂದರು.
*ಶೀಘ್ರ ಪ್ರತಿಪಕ್ಷಗಳೊಂದಿಗೆ ಮಾತುಕತೆ
ಪ್ರತಿಪಕ್ಷಗಳೊಂದಿಗೆ ಮಾತುಕತೆ ಸನ್ನಿಹಿತವಾಗಿದೆ ಎಂದು ಹೇಳಿದ ರಾಜ್ಯಸಭೆಯಲ್ಲಿ ಸದನ ನಾಯಕ ಜೆ.ಪಿ.ನಡ್ಡಾ ಅವರು,‘ಶೀಘ್ರವೇ ಪ್ರತಿಪಕ್ಷಗಳ ನಾಯಕರೊಂದಿಗೆ ಸಭೆ ನಡೆಯಲಿದೆ ಮತ್ತು ಬೇಗ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತದೆ ಎಂದು ನನಗೆ ತಿಳಿಸಲಾಗಿದೆ’ ಎಂದು ಹೇಳಿದರು.
► ಪ್ರತಿಭಟನೆಗಳನ್ನು ಹುಟ್ಟುಹಾಕಿದ ಎಸ್ಐಆರ್
ಮಂಗಳವಾರ ಲೋಕಸಭೆಯಲ್ಲಿ ಕಾಂಗ್ರೆಸ್ ಮತ್ತು ಇತರ ಪ್ರತಿಪಕ್ಷ ಸದಸ್ಯರು ಎಸ್ಐಆರ್ ಕುರಿತು ತುರ್ತು ಚರ್ಚೆಗೆ ಆಗ್ರಹಿಸಿ ಪ್ರತಿಭಟನೆಗಳನ್ನು ನಡೆಸಿದ ಬಳಿಕ ಸದನವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.
ಎಸ್ಐಆರ್ ವಿವಾದದ ಜೊತೆಗೆ ದಿಲ್ಲಿಯ ಕೆಂಪುಕೋಟೆ ಬಳಿ ಇತ್ತೀಚಿಗೆ ಸಂಭವಿಸಿದ ಸ್ಫೋಟ,ರಾಷ್ಟ್ರ ರಾಜಧಾನಿಯಲ್ಲಿ ಹದಗೆಡುತ್ತಿರುವ ವಾಯು ಮಾಲಿನ್ಯ ಮತ್ತು ವಿದೇಶಾಂಗ ನೀತಿ ವಿಷಯಗಳಲ್ಲಿಯೂ ಚರ್ಚೆಗಳಿಗೆ ಪ್ರತಿಪಕ್ಷಗಳು ಆಗ್ರಹಿಸುತ್ತಿವೆ.
ನಿಮಗೆ (ಪ್ರತಿಪಕ್ಷಗಳು) ಚುನಾವಣೆಗಳನ್ನು ಗೆಲ್ಲಲು ಸಾಧ್ಯವಿಲ್ಲ ಮತ್ತು ಜನರು ನಿಮ್ಮನ್ನು ನಂಬುವುದಿಲ್ಲ. ಹೀಗಾಗಿ ನೀವು ನಿಮ್ಮ ಸಿಟ್ಟನ್ನು ಸಂಸತ್ತಿನಲ್ಲಿ ಹೊರಹಾಕುತ್ತೀರಿ. ಇದು ಸರಿಯಲ್ಲ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಹೇಳಿದರು.
ಕಾಂಗ್ರೆಸ್, ಟಿಎಂಸಿ, ಡಿಎಂಕೆ, ಆಪ್, ಎಸ್ಪಿ ಮತ್ತು ಸಿಪಿಎಂ ಸದಸ್ಯರು ಮಂಗಳವಾರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರನ್ನು ಭೇಟಿಯಾಗಿ ಎಸ್ಐಆರ್ ಕುರಿತು ಚರ್ಚೆಗೆ ಆಗ್ರಹಿಸಿದ್ದರು. ಚುನಾವಣಾ ಸುಧಾರಣೆಗಳ ಕುರಿತು ಸದನದಲ್ಲಿ ಚರ್ಚೆಗಾಗಿ ಸರಕಾರವು ಸಮಯವನ್ನು ಪ್ರಕಟಿಸಬೇಕು ಎಂದು ಅವರು ಒತ್ತಾಯಿಸಿದ್ದರು.
ನಾವು ನಿಯಮ 267ರಡಿ ಎಸ್ಐಆರ್ ಕುರಿತು ಚರ್ಚೆಗೆ ಆಗ್ರಹಿಸಿದ್ದೇವೆ. ಸಂಸದೀಯ ಸಚಿವರು ಏನೇ ಹೇಳಲಿ, ಅಜೆಂಡಾ ಏನೇ ಆಗಿರಲಿ, ನಾವು ಎತ್ತಿರುವ ವಿಷಯಕ್ಕೆ ಮೊದಲ ಆದ್ಯತೆ ನೀಡಬೇಕು. ಇತರ ಎಲ್ಲ ವಿಷಯಗಳನ್ನು ಬದಿಗಿರಿಸಬೇಕು ಮತ್ತು ಎತ್ತಿರುವ ವಿಷಯಕ್ಕೆ ಆದ್ಯತೆ ನೀಡಬೇಕು ಎಂದು ನಿಯಮ 267 ಹೇಳುತ್ತದೆ. ಇಲ್ಲದಿದ್ದರೆ ನಿಯಮ 267 ರಡಿ ನೋಟಿಸ್ಗೆ ಅರ್ಥವೇ ಇಲ್ಲ. ಸದನವು ಇತರ ಎಲ್ಲ ವಿಷಯಗಳನ್ನು ಬದಿಗಿರಿಸಬೇಕು ಮತ್ತು ಎಸ್ಐಆರ್ ಚರ್ಚೆಯನ್ನು ಕೈಗೆತ್ತಿಕೊಳ್ಳಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.







