ದಿಲ್ಲಿಯ ಮಹಿಪಾಲಪುರದಲ್ಲಿ ಬಸ್ ಟೈರ್ ಸ್ಫೋಟ | ಭಯಭೀತರಾದ ಜನರು!

Screengrab:X/@PTI_News
ಹೊಸದಿಲ್ಲಿ: ನೈಋತ್ಯ ದಿಲ್ಲಿಯ ಮಹಿಪಾಲಪುರದಲ್ಲಿ ಗುರುವಾರ ಬೆಳಿಗ್ಗೆ ಬಸ್ ಟೈರ್ ಸ್ಫೋಟಗೊಂಡು 'ಸ್ಫೋಟ'ದಂತಹ ಶಬ್ದ ಕೇಳಿಬಂದ ಪರಿಣಾಮ ಜನರು ಭಯಭೀತರಾದ ಘಟನೆ ನಡೆದಿದೆ.
ಸೋಮವಾರ ಕೆಂಪುಕೋಟೆಯ ಬಳಿ ಸಂಭವಿಸಿದ ಭೀಕರ ಸ್ಫೋಟದಲ್ಲಿ ಕನಿಷ್ಠ 13 ಮಂದಿ ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದರು. ಆ ಘಟನೆ ಮಾಸುವ ಮುನ್ನವೇ ಮತ್ತೊಂದು 'ದೊಡ್ಡ ಶಬ್ಧ' ಸ್ಥಳದಲ್ಲಿ ಆತಂಕದ ವಾತಾವರಣ ಸೃಷ್ಟಿಸಿತು.
ಬೆಳಿಗ್ಗೆ 9.19ಕ್ಕೆ ಮಹಿಪಾಲಪುರದ ರಾಡಿಸನ್ ಹೊಟೇಲ್ ಬಳಿಯಲ್ಲಿ ಸ್ಫೋಟದಂತ ಶಬ್ದ ಕೇಳಿಬಂದ ಬಗ್ಗೆ ಕರೆ ಬಂದ ಹಿನ್ನೆಲೆಯಲ್ಲಿ ಮೂರು ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ಕಳುಹಿಸಲಾಯಿತು ಎಂದು ದಿಲ್ಲಿಯ ಅಗ್ನಿಶಾಮಕ ದಳ ತಿಳಿಸಿದೆ.
ಅಗ್ನಿಶಾಮಕ ದಳ ಮತ್ತು ಪೊಲೀಸರು ಪರಿಶೀಲನೆ ನಡೆಸಿದ ಸ್ಥಳದಲ್ಲಿ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಲಿಲ್ಲ.
“ಕರೆ ಮಾಡಿದ ವ್ಯಕ್ತಿಯನ್ನು ಸಂಪರ್ಕಿಸಿದ್ದೇವೆ. ಅವರು ಗುರುಗ್ರಾಮ್ ಕಡೆ ಹೋಗುತ್ತಿದ್ದಾಗ ದೊಡ್ಡ ಶಬ್ದ ಕೇಳಿಬಂದಿದೆ ಎಂದು ತಿಳಿಸಿದ್ದಾರೆ. ಸ್ಥಳ ಸಂಪೂರ್ಣ ಪರಿಶೀಲನೆಗೊಂಡಿದೆ, ಯಾವುದೇ ಸುಳಿವು ಸಿಕ್ಕಿಲ್ಲ” ಎಂದು ನೈಋತ್ಯ ವಿಭಾಗದ ಪೊಲೀಸ್ ಉಪ ಆಯುಕ್ತ ಅಮಿತ್ ಗೋಯಲ್ ಹೇಳಿದ್ದಾರೆ.
ಈ ಕುರಿತು ಸ್ಥಳೀಯವಾಗಿ ವಿಚಾರಣೆ ನಡೆಸಿದಾಗ ಧೌಲಾ ಕುವಾನ್ ಕಡೆಗೆ ತೆರಳುತ್ತಿದ್ದ ದಿಲ್ಲಿ ಸಾರಿಗೆ ಬಸ್ನ ಹಿಂಭಾಗದ ಟೈರ್ ಸಿಡಿದು ದೊಡ್ಡ ಶಬ್ದ ಉಂಟಾಗಿದೆ ಎಂದು ಸಿಬ್ಬಂದಿ ಪೊಲೀಸರಿಗೆ ತಿಳಿಸಿದ್ದಾರೆ ಡಿಸಿಪಿ ಖಚಿತಪಡಿಸಿದರು.
ಪರಿಸ್ಥತಿ ಸಾಮಾನ್ಯವಾಗಿದ್ದು, ಸಾರ್ವಜನಿಕರು ಆತಂಕಪಡಬೇಕಾದ ಅಗತ್ಯವಿಲ್ಲ ಎಂದು ಗೋಯಲ್ ಸ್ಪಷ್ಟಪಡಿಸಿದ್ದಾರೆ.







