‘ಆಪರೇಶನ್ ಸಿಂಧೂರ’ಕ್ಕೆ ಪಹಲ್ಗಾಮ್ ಸಂತ್ರಸ್ತರ ಸಂಬಂಧಿಗಳ ಮೆಚ್ಚುಗೆ
ಹೊಸದಿಲ್ಲಿ: ಎಪ್ರಿಲ್ 22ರಂದು ಪಹಲ್ಗಾಮ್ ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆಯು ಬುಧವಾರ ನಡೆಸಿರುವ ‘ಆಪರೇಶನ್ ಸಿಂಧೂರ’ ಕಾರ್ಯಾಚರಣೆಯನ್ನು ಸಂತ್ರಸ್ತರು ಪ್ರಶಂಸಿಸಿದ್ದಾರೆ.
‘ಆಪರೇಶನ್ ಸಿಂಧೂರ’ವು ಸಂತ್ರಸ್ತರಿಗೆ ಸಲ್ಲಿಸಲಾಗಿರುವ ಸರಿಯಾದ ಶ್ರದ್ಧಾಂಜಲಿಯಾಗಿದೆ ಎಂದು ಹತ್ಯೆಗೀಡಾಗಿರುವ 26 ಮಂದಿಯಲ್ಲಿ ಒಬ್ಬರಾಗಿರುವ ಸಂತೋಷ್ ರ ಪತ್ನಿ ಪ್ರಗತಿ ಜಗದಾಳೆ ಹೇಳಿದ್ದಾರೆ. ‘‘ಭಯೋತ್ಪಾದಕರು ನಮ್ಮ ಸಿಂಧೂರವನ್ನು ಅಳಿಸಿಹಾಕಿದರು. ಆದರೆ, ‘ಆಪರೇಶನ್ ಸಿಂಧೂರ’ದಡಿಯಲ್ಲಿ ನಮ್ಮ ಸಶಸ್ತ್ರ ಪಡೆಗಳು ಪಾಕಿಸ್ತಾನದಲ್ಲಿರುವ ಭಯೋತ್ಪಾದಕರ ನೆಲೆಗಳನ್ನು ನಾಶಪಡಿಸಿರುವುದರಿಂದ ನನಗೆ ಸಂತೋಷವಾಗಿದೆ’’ ಎಂದು ಪಿಟಿಐಯೊಂದಿಗೆ ಮಾತನಾಡಿದ ಅವರು ಹೇಳಿದರು.
ನಮ್ಮ ಸಶಸ್ತ್ರ ಪಡೆಗಳು ಕ್ಷಿಪಣಿ ದಾಳಿಗಳ ಮೂಲಕ ಅವರಿಗೆ ಸರಿಯಾದ ಉತ್ತರ ನೀಡಿರುವುದು ಹೆಮ್ಮೆಯ ವಿಚಾರವಾಗಿದೆ ಎಂದು ದಂಪತಿಯ ಪುತ್ರಿ ಅಸವರಿ ಜಗದಾಳೆ ಹೇಳಿದರು.
ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಪ್ರಾಣ ಕಳೆದುಕೊಂಡಿರುವ ಕೌಸ್ತುಭ ಗನ್‌ಬೋಟೆಯವರ ಪತ್ನಿ ಸಂಗೀತಾ ಗನ್‌ಬೋಟೆ ಕೂಡ ‘ಆಪರೇಶನ್ ಸಿಂಧೂರ’ ಕಾರ್ಯಾಚರಣೆಯ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ. ‘‘ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ನಾನು ಮತ್ತು ಇತರ ಮಹಿಳೆಯರು ನಮ್ಮ ಸಿಂಧೂರ ಕಳೆದುಕೊಂಡಿದ್ದೇವೆ. ಅದಕ್ಕೆ ಭಾರತ ಪ್ರತೀಕಾರ ತೀರಿಸಿರುವುದರಿಂದ ತುಂಬಾ ಸಂತೋಷವಾಗಿದೆ ಎಂದು ಪಿಟಿಐಯೊಂದಿಗೆ ಮಾತನಾಡುತ್ತಾ ಅವರು ಹೇಳಿದರು.
ಪಹಲ್ಗಾಮ್‌ನಲ್ಲಿ ಪ್ರಾಣ ಕಳೆದುಕೊಂಡಿರುವ ಶುಭಮ್ ದ್ವಿವೇದಿಯ ತಂದೆ ಸಂಜಯ್ ದ್ವಿವೇದಿ, ಭಾರತೀಯರ ನೋವಿಗೆ ಸ್ಪಂದಿಸಿರುವ ಭಾರತೀಯ ಸೇನೆ ಮತ್ತು ಪ್ರಧಾನಿಗೆ ಗೌರವ ಸಲ್ಲಿಸಿದ್ದಾರೆ.







