ʼಮಿಚೌಂಗ್ ʼ ಪ್ರವಾಹ ಪೀಡಿತ ರಾಜ್ಯಗಳಿಗೆ ಎಸ್ಡಿಆರ್ಎಫ್ ನಿಂದ ಪರಿಹಾರ ನಿಧಿ ಬಿಡುಗಡೆ : ಕೇಂದ್ರ ಘೋಷಣೆ
ಪ್ರವಾಹ ಪೀಡಿತ ತಮಿಳುನಾಡಿಗೆ 450 ಕೋಟಿ ರೂ., ಆಂಧ್ರಕ್ಕೆ 493 ಕೋಟಿ ರೂ., ಚೆನ್ನೈ ಪ್ರವಾಹ ಉಪಶಮನ ಯೋಜನೆಗೆ 561 ಕೋಟಿ ರೂ.

Photo: PTI
ಹೊಸದಿಲ್ಲಿ: ಮಿಚೌಂಗ್ ಚಂಡಮಾರುತದ ಹಿನ್ನೆಲೆಯಲ್ಲಿ ಚೆನ್ನೈ ಸೇರಿದಂತೆ ತಮಿಳುನಾಡಿನ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ನಡೆಯುತ್ತಿರುವ ಪರಿಹಾರ ಕಾರ್ಯಾಚರಣೆಗಳಿಗೆ ಕೇಂದ್ರ ಸರಕಾರವು ರಾಜ್ಯ ವಿಪತ್ತು ಪರಿಹಾರ ನಿಧಿ (SDRF)ಯಿಂದ 450 ಕೋಟಿ ರೂ.ಗಳನ್ನು ತಕ್ಷಣವೇ ಬಿಡುಗಡೆಗೊಳಿಸಿದೆ ಹಾಗೂ ಚೆನ್ನೈನಲ್ಲಿ ನೆರೆ ಉಪಶಮನ ಯೋಜನೆಗಳಿಗೆ 561 ಕೋಟಿ ರೂ.ಗಳನ್ನು ಅನುಮೋದಿಸಿದೆ. ಇದರ ಜೊತೆಗೆ ಆಂಧ್ರಪ್ರದೇಶದ ಮಿಚೌಂಗ್ ಚಂಡಮಾರುತ ಪೀಡಿತ ಜಿಲ್ಲೆಗಳಲ್ಲಿನ ಪರಿಹಾರ ಕಾರ್ಯಾಚರಣೆಗಳಿಗೆ ಎರಡನೆ ಕಂತಿನಲ್ಲಿ 493 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ತಿಳಿಸಿದ್ದಾರೆ.
ಮಿಚೌಂಗ್ ಚಂಡಮಾರುತವು ತಮಿಳುನಾಡು ಹಾಗೂ ಆಂಧ್ರಪ್ರದೇಶಗಳ ಮೇಲೆ ಪರಿಣಾಮವನ್ನು ಬೀರಿದೆ. ಈ ರಾಜ್ಯಗಳ ಹಲವಾರು ಪ್ರದೇಶಗಳು ನೆರೆನೀರಿನಲ್ಲಿ ಮುಳುಗಿದ್ದು, ಬೆಳೆಗಳಿಗೂ ಹಾನಿಯಾಗಿದೆ ಎಂದು ಶಾ x ನಲ್ಲಿ ಬರೆದಿದ್ದಾರೆ.
ಕೇಂದ್ರ ಸರಕಾರವು ಈ ಎರಡೂ ರಾಜ್ಯಗಳಿಗೆ ಇಷ್ಟೇ ಮೊತ್ತದ ಮೊದಲ ಕಂತನ್ನು ಈಗಾಗಲೇ ಬಿಡುಗಡೆಗೊಳಿಸಿದೆ ಎಂದವರು ಹೇಳಿದರು. ಸಂತ್ರಸ್ತರ ಸುರಕ್ಷತೆ ಹಾಗೂ ಕ್ಷೇಮಕ್ಕಾಗಿ ನಾನು ಪ್ರಾರ್ಥಿಸುತ್ತೇನೆ. ಈ ನಿರ್ಣಾಯಕ ತಾಸಿನಲ್ಲಿ ನಾವು ಅವರ ಜೊತೆಗಿರುತ್ತೇವನೆ ಹಾಗೂ ಅದಷ್ಟು ಶೀಘ್ರದಲ್ಲೇ ಪರಿಸ್ಥಿತಿಯು ಸಹಜತೆಗೆ ಬರುವುದೆಂದು ಖಾತರಿಪಡಿಸುತ್ತೇನೆ’’ಎಂದು ಶಾ ತಿಳಿಸಿದ್ದಾರೆ.
ಚೆನ್ನೈ ನಗರಕ್ಕೆ ಘೋಷಿಸಲಾಗಿರುವ ನೆರೆಉಪಶಮನ ಯೋಜನೆಯು, ಚೆನ್ನೈ ನಗರಕ್ಕೆ ಪ್ರವಾಹವನ್ನು ಎದುರಿಸಲು ನೆರವಾಗಲಿದೆ. ನಗರ ಪ್ರವಾಹ ನಿರ್ವಹಣೆಗೆ ವಿಸ್ತೃತವಾದ ಕಾರ್ಯಚೌಕಟ್ಟನ್ನು ಅಭಿವೃದ್ದಿಪಡಿಸಲು ಸಹಾಯವಾಗಲಿದೆ’’ ಎಂದು x ನಲ್ಲಿ ತಿಳಿಸಿದ್ದಾರೆ.







