ಕುಂಭಮೇಳ ಕಾಲ್ತುಳಿತದಲ್ಲಿನ ನೈಜ ಸಾವಿನ ಸಂಖ್ಯೆ ಕೊಡಿ: ಅಖಿಲೇಶ್ ಯಾದವ್ ಆಗ್ರಹ
"ನೈಜ ಸಾವಿನ ಸಂಖ್ಯೆಯನ್ನು ಡಬಲ್ ಎಂಜಿನ್ ಸರ್ಕಾರ ಮರೆಮಾಚುತ್ತಿದೆ"

ಅಖಿಲೇಶ್ ಯಾದವ್ (Photo: indiatoday.in)
ಹೊಸದಿಲ್ಲಿ: ಜನವರಿ 29 ರಂದು ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆದ ಮಹಾ ಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿನ ನೈಜ ಸಾವಿನ ಸಂಖ್ಯೆಯನ್ನು ಡಬಲ್ ಎಂಜಿನ್ ಸರ್ಕಾರ ಮರೆಮಾಚುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಆರೋಪಿಸಿದ್ದಾರೆ.
ಕಾಲ್ತುಳಿತದಲ್ಲಿ 30 ಜನರು ಸಾವನ್ನಪ್ಪಿದ್ದಾರೆ ಮತ್ತು 60 ಜನರು ಗಾಯಗೊಂಡಿದ್ದಾರೆ ಎಂದು ಸರ್ಕಾರ ಹೇಳಿದೆ. ಆದರೆ ವಿರೋಧ ಪಕ್ಷವು ಈ ಸಂಖ್ಯೆ ಹೆಚ್ಚಾಗಿದೆ ಎಂದು ಹೇಳಿಕೊಂಡಿದೆ.
ಲೋಕಸಭೆಯಲ್ಲಿ ಬಜೆಟ್ ಅಧಿವೇಶನದಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ಮೇಲೆ ಮಾತನಾಡಿದ ಸಮಾಜವಾದಿ ಪಕ್ಷದ ಮುಖ್ಯಸ್ಥ ಮತ್ತು ಸಂಸದ ಅಖಿಲೇಶ್ ಯಾದವ್, ಮಹಾ ಕುಂಭಮೇಳದಲ್ಲಿ ಸಂಭವಿಸಿದ ಸಾವುನೋವುಗಳ ಕುರಿತು ಅಧಿಕೃತ ಅಂಕಿಅಂಶಗಳನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.
"ಸರ್ಕಾರ ನಿರಂತರವಾಗಿ ಬಜೆಟ್ ಅಂಕಿಅಂಶಗಳನ್ನು ನೀಡುತ್ತಿರುವಾಗ, ದಯವಿಟ್ಟು ಮಹಾ ಕುಂಭದಲ್ಲಿ ಮಡಿದವರ ಅಂಕಿಅಂಶಗಳನ್ನು ಸಹ ನೀಡಿ. ಮಹಾ ಕುಂಭದ ವ್ಯವಸ್ಥೆಗಳ ಬಗ್ಗೆ ಸ್ಪಷ್ಟೀಕರಣ ನೀಡಲು ಸರ್ವಪಕ್ಷ ಸಭೆ ಕರೆಯಬೇಕು. ಮಹಾ ಕುಂಭದ ವಿಪತ್ತು ನಿರ್ವಹಣೆ ಮತ್ತು ಕಳೆದುಹೋದವರ ಮತ್ತು ಪತ್ತೆ ಕೇಂದ್ರದ ಜವಾಬ್ದಾರಿಯನ್ನು ಸೇನೆಗೆ ನೀಡಬೇಕು" ಎಂದು ಅಖಿಲೇಶ್ ಯಾದವ್ ಮಂಗಳವಾರ ಸಂಸತ್ತಿನಲ್ಲಿ ಆಗ್ರಹಿಸಿದರು.
ಬಿಜೆಪಿ ಸರ್ಕಾರದ ವಿರುದ್ಧ ಭಾರಿ ಆರೋಪ ಹೊರಿಸಿದ ಅಖಿಲೇಶ್ ಯಾದವ್, ಕಾಲ್ತುಳಿತ ನಡೆದ ಸ್ಥಳದಲ್ಲಿನ ಸಾಕ್ಷ್ಯಗಳನ್ನು ನಾಶಮಾಡಲು ಜೆಸಿಬಿಗಳನ್ನು ಬಳಸಲಾಗಿದೆ ಎಂದು ಆರೋಪಿಸಿದರು.
"ಮಹಾ ಕುಂಭ ಅಪಘಾತದಲ್ಲಿ ಸಾವನ್ನಪ್ಪಿದವರ ಅಂಕಿಅಂಶಗಳು, ಗಾಯಾಳುಗಳ ಚಿಕಿತ್ಸೆ, ಔಷಧಿಗಳ ಲಭ್ಯತೆ, ವೈದ್ಯರು, ಆಹಾರ, ನೀರು, ಸಾರಿಗೆ ವ್ಯವಸ್ಥೆಯ ಕುರಿತ ಮಾಹಿತಿಯನ್ನು ಸಂಸತ್ತಿನಲ್ಲಿ ಮಂಡಿಸಬೇಕು. ಮಹಾ ಕುಂಭ ದುರಂತಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಸತ್ಯವನ್ನು ಮರೆಮಾಚಿರುವವರಿಗೆ ಶಿಕ್ಷೆಯಾಗಬೇಕು. ಎಲ್ಲವೂ ಸರಿಯಾಗಿದೆ ಎಂದಾದರೆ ಅಂಕಿ ಅಂಶಗಳನ್ನು ಏಕೆ ಮರೆಮಾಚಲಾಗಿದೆ ಎಂದು ನಾವು ಡಬಲ್-ಎಂಜಿನ್ ಸರ್ಕಾರವನ್ನು ಕೇಳುತ್ತೇವೆ", ಎಂದು ಅವರು ಪ್ರಶ್ನಿಸಿದರು.
ಈ ನಡುವೆ, ಘಟನೆಯ ನಂತರ 15,000 ಜನರು ತಮ್ಮ ಕುಟುಂಬದ ಸದಸ್ಯರು ಕಾಣೆಯಾಗಿದ್ದಾರೆ ಎಂದು ಹೇಳಿದ್ದಾರೆ. ಸರ್ಕಾರ ಯಾವುದೇ ಮಾಹಿತಿಯನ್ನು ನೀಡುತ್ತಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ರಾಮ್ ಗೋಪಾಲ್ ಯಾದವ್ ಮಂಗಳವಾರ ಹೇಳಿದ್ದಾರೆ.
ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಗೆ ಸೇರಲು ಕ್ಲಿಕ್ ಮಾಡಿ ► https://whatsapp.com/channel/0029VaA8ju86LwHn9OQpEq28