24,500 ಕೋಟಿ ರೂ. ಪಾವತಿಸಿ: ರಿಲಯನ್ಸ್, ಪಾಲುದಾರರಿಗೆ ನೋಟಿಸ್

Image Source : PTI
ಹೊಸದಿಲ್ಲಿ: ಸರಕಾರಿ ಒಡೆತನದ ಒಎನ್ಜಿಸಿಗೆ ಸೇರಿದ ನಿಕ್ಷೇಪದಿಂದ ಹರಿದು ಬಂದಿರಬಹುದಾದ ನೈಸರ್ಗಿಕ ಅನಿಲದ ಉತ್ಪಾದನೆ ಮತ್ತು ಮಾರಾಟದಿಂದ ಬಂದಿರುವ ಲಾಭದಿಂದ 24,500 ಕೋಟಿ ರೂಪಾಯಿ ನೀಡುವಂತೆ ಕೋರಿ ಸರಕಾರವು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮತ್ತು ಅದರ ಪಾಲುದಾರರಿಗೆ ಬೇಡಿಕೆ ನೋಟಿಸ್ ಜಾರಿಗೊಳಿಸಿದೆ.
ದಿಲ್ಲಿ ಹೈಕೋರ್ಟ್ನ ಫೆಬ್ರವರಿ 14ರ ತೀರ್ಪಿನ ಹಿನ್ನೆಲೆಯಲ್ಲಿ ಸರಕಾರವು ಈ ಬೇಡಿಕೆ ನೋಟಿಸ್ ನೀಡಿದೆ. ದಿಲ್ಲಿ ಹೈಕೋರ್ಟ್ ತನ್ನ ತೀರ್ಪಿನಲ್ಲಿ ಅಂತರ್ರಾಷ್ಟ್ರೀಯ ಪಂಚಾಯಿತಿ ನ್ಯಾಯಮಂಡಳಿಯ ತೀರ್ಪನ್ನು ತಳ್ಳಿಹಾಕಿತ್ತು.
ನೆರೆಯ ನಿಕ್ಷೇಪಗಳಿಂದ ಬಂದಿರಬಹುದಾದ ನೈಸರ್ಗಿಕ ಅನಿಲಕ್ಕೆ ಪರಿಹಾರ ನೀಡಲು ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಅದರ ಪಾಲುದಾರ ಕಂಪೆನಿ ಬಿ.ಪಿ. ಪಿಎಲ್ಸಿ ಜವಾಬ್ದಾರರಲ್ಲ ಎಂದು ಅಂತರ್ರಾಷ್ಟ್ರೀಯ ಪಂಚಾಯಿತಿ ನ್ಯಾಯಮಂಡಳಿಯು ತನ್ನ ತೀರ್ಪಿನಲ್ಲಿ ಹೇಳಿತ್ತು.
‘‘ದಿಲ್ಲಿ ಹೈಕೋರ್ಟ್ ತೀರ್ಪಿನ ಆಧಾರದಲ್ಲಿ, 24,500 ಕೋಟಿ ರೂ. ಪಾವತಿಸುವಂತೆ ಕೋರಿ ಪೆಟ್ರೋಲಿಯಮ್ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, ಬಿ.ಪಿ. ಎಕ್ಸ್ಪ್ಲೊರೇಶನ್ (ಆಲ್ಫಾ) ಲಿಮಿಟೆಡ್ ಮತ್ತು ನಿಕೊ (ನೆಕೊ) ಲಿಮಿಟೆಡ್ಗೆ ಬೇಡಿಕೆ ನೋಟಿಸ್ ಜಾರಿಗೊಳಿಸಿದೆ’’ ಎಂದು ಶೇರು ಮಾರುಕಟ್ಟೆಗೆ ಸಲ್ಲಿಸಿದ ಮಾಹಿತಿಯಲ್ಲಿ ರಿಲಯನ್ಸ್ ತಿಳಿಸಿದೆ.







