ಏರ್‌ಟೆಲ್ ಬೆನ್ನಲ್ಲೇ ಎಲಾನ್ ಮಸ್ಕ್ ಒಡೆತನದ ಸ್ಟಾರ್‌ಲಿಂಕ್ ಜೊತೆಗೆ ರಿಲಯನ್ಸ್ ಜಿಯೋ ಒಡಂಬಡಿಕೆ

ಹೊಸದಿಲ್ಲಿ: ರಿಲಯನ್ಸ್ ಗ್ರೂಪ್‌ನ ರಿಲಯನ್ಸ್ ಜಿಯೋ ಎಲಾನ್ ಮಸ್ಕ್ ನೇತೃತ್ವದ ಜಗತ್ತಿನ ಅತ್ಯಂತ ಸುಧಾರಿತ ಇಂಟರ್ನೆಟ್ ಸೇವೆಯನ್ನು ಒದಗಿಸುವ ಸ್ಯಾಟ್‌ಲೈಟ್ ಇಂಟರ್ನೆಟ್ ಕಂಪೆನಿ ಸ್ಟಾರ್‌ಲಿಂಕ್ ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಿದೆ.
ಭಾರತದಲ್ಲಿ ಜಿಯೋ ನೆಟ್ವಕ್‌ನ ಅತಿದೊಡ್ಡ ಪ್ರತಿಸ್ಪರ್ಧಿ, ಭಾರತದ ಎರಡನೇ ಅತಿದೊಡ್ಡ ಟೆಲಿಕಾಂ ಕಂಪೆನಿ ಏರ್‌ಟೆಲ್- ʼಸ್ಟಾರ್‌ಲಿಂಕ್ʼ ಜೊತೆಗೆ ಒಪ್ಪಂದ ಮಾಡಿಕೊಂಡ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ರಿಲಯನ್ಸ್ ಜಿಯೋ ಈ ಕುರಿತ ಒಪ್ಪಂದವನ್ನು ಘೋಷಿಸಿದೆ. ʼಜಿಯೋ ಪ್ಲಾಟ್‌ಫಾರ್ಮ್ ಲಿಮಿಟೆಡ್ (ಜೆಪಿಎಲ್) ಭಾರತದಲ್ಲಿನ ಗ್ರಾಹಕರಿಗೆ ಸ್ಟಾರ್‌ಲಿಂಕ್ ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಸೇವೆಗಳನ್ನು ನೀಡಲು ಸ್ಪೇಸ್ ಎಕ್ಸ್‌ನೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದೆʼ ಎಂದು ಹೇಳಿದೆ.
ಜಿಯೋ ತನ್ನ ರಿಟೇಲ್ ಮಳಿಗೆಗಳಲ್ಲಿ ಸ್ಟಾರ್‌ಲಿಂಕ್ ಉಪಕರಣಗಳನ್ನು ಲಭ್ಯವಾಗುವಂತೆ ಮಾಡುವುದು ಮಾತ್ರವಲ್ಲದೆ, ಗ್ರಾಹಕ ಸೇವೆ ಸ್ಥಾಪನೆ ಮತ್ತು ಸಕ್ರಿಯಗೊಳಿಸುವಿಕೆಯನ್ನು ಬೆಂಬಲಿಸಲು ಕಾರ್ಯವಿಧಾನವನ್ನು ಹೊಂದಿದೆ. ಸ್ಪೇಸ್ಎಕ್ಸ್ ನೊಂದಿಗಿನ ಈ ಒಪ್ಪಂದವು ಭಾರತದಾದ್ಯಂತ ಎಲ್ಲಾ ಉದ್ಯಮಗಳು, ಸಣ್ಣ ಮತ್ತು ಮಧ್ಯಮ ವ್ಯವಹಾರಗಳು ಮತ್ತು ಸಮುದಾಯಗಳಿಗೆ ಸುಧಾರಿತ ಇಂಟರ್ನೆಟ್ ಸೇವೆಯನ್ನು ಒದಗಿಸುವುದನ್ನು ಖಚಿತಪಡಿಸಿಕೊಳ್ಳಲಿರುವ ಜಿಯೋ ಸಂಸ್ಥೆಯ ಬದ್ಧತೆಯ ಭಾಗವಾಗಿದೆ ಎಂದು ಕಂಪೆನಿಯು ಹೇಳಿದೆ.
ಈ ಕುರಿತು ಜಿಯೋ ಗ್ರೂಪ್ ಸಿಇಒ ಮ್ಯಾಥ್ಯೂ ಉಮ್ಮನ್ ಪ್ರತಿಕ್ರಿಯಿಸಿ, ಪ್ರತಿಯೋರ್ವ ಭಾರತೀಯರು, ಅಂದರೆ ಅವರು ಎಲ್ಲಿಯೇ ವಾಸಿಸುತ್ತಿರಲಿ, ಕೈಗೆಟುಕುವ ಮತ್ತು ಹೆಚ್ಚಿನ ವೇಗದಲ್ಲಿ ಅವರಿಗೆ ಇಂಟರ್‌ನೆಟ್ ಸಿಗುವಂತೆ ನೋಡಿಕೊಳ್ಳುವುದು ಜಿಯೋದ ಪ್ರಮುಖ ಆದ್ಯತೆಯಾಗಿದೆ ಎಂದು ಹೇಳಿದರು.
ಮಾರ್ಚ್ 11ರಂದು ಏರ್‌ಟೆಲ್ ಕಂಪನಿ ಸ್ಟಾರ್‌ಲಿಂಕ್ ಜೊತೆಗೆ ಇದೇ ರೀತಿಯ ಒಪ್ಪಂದಕ್ಕೆ ಸಹಿ ಹಾಕಿದೆ. ಏರ್‌ಟೆಲ್ ನ ರಿಟೇಲ್ ಮಳಿಗೆಗಳಲ್ಲಿ ಸ್ಟಾರ್‌ಲಿಂಕ್‌ನ ಉಪಕರಣಗಳು ಲಭ್ಯವಾಗುವಂತೆ ಮಾಡುವ ನಿಟ್ಟಿನಲ್ಲಿ ಏರ್‌ಟೆಲ್ ಹಾಗೂ ಸ್ಪೇಸ್ಎಕ್ಸ್ ರೂಪುರೇಷೆಗಳನ್ನು ಸಿದ್ದಪಡಿಸುತ್ತಿವೆ. ಉದ್ಯಮ ಗ್ರಾಹಕರು, ಶಾಲೆಗಳು, ಆರೋಗ್ಯ ಕೇಂದ್ರಗಳು ಇತ್ಯಾದಿಗಳಲ್ಲದೆ, ಭಾರತದ ಬಹುತೇಕ ಗ್ರಾಮೀಣ ಭಾಗಗಳಲ್ಲಿಯೂ ಸ್ಟಾರ್‌ಲಿಂಕ್ ಸೇವೆ ದೊರೆಯಲಿದೆ ಎಂದು ಏರ್‌ಟೆಲ್ ಹೇಳಿಕೆಯಲ್ಲಿ ತಿಳಿಸಿತ್ತು.