ಕರೆನ್ಸಿ ನೋಟುಗಳಿಂದ ಗಾಂಧಿ ಚಿತ್ರ ತೆಗೆದುಹಾಕಲು ಕೇಂದ್ರದ ಹುನ್ನಾರ: CPM ಸಂಸದ ಬ್ರಿಟ್ಟಾಸ್

Photo Credit : PTI
ಹೊಸದಿಲ್ಲಿ,ಡಿ.23: ಕರೆನ್ಸಿ ನೋಟುಗಳಿಂದ ಮಹಾತ್ಮಾ ಗಾಂಧಿಯವರ ಚಿತ್ರವನ್ನು ತೆಗೆದುಹಾಕಲು ಕೇಂದ್ರವು ಮುಂದಾಗಿದೆ ಎಂದು ಸಿಪಿಎಂ ರಾಜ್ಯಸಭಾ ಸದಸ್ಯ ಜಾನ್ ಬ್ರಿಟ್ಟಾಸ್ ಆರೋಪಿಸಿದ್ದಾರೆ. ಇಂತಹ ಯಾವುದೇ ಪ್ರಸ್ತಾವವು ಪರಿಶೀಲನೆಯಲ್ಲಿಲ್ಲ ಎಂದು ಆರ್ಬಿಐ ಪದೇಪದೇ ಹೇಳಿದ್ದರೂ ಈ ಆರೋಪ ಕೇಳಿ ಬಂದಿದೆ.
ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬ್ರಿಟ್ಟಾಸ್,ಈ ಬಗ್ಗೆ ಈಗಾಗಲೇ ಉನ್ನತ ಮಟ್ಟದ ಸಭೆ ನಡೆದಿದೆ. ಇದು ಸರಕಾರದ ಆಲೋಚನೆಯಲ್ಲಿ ಬದಲಾವಣೆಯನ್ನು ಸೂಚಿಸುತ್ತಿದೆ ಎಂದು ಹೇಳಿದರು.
ಅಧಿಕೃತ ನಿರಾಕರಣೆಗಳ ಹೊರತಾಗಿಯೂ ಉನ್ನತ ಮಟ್ಟದಲ್ಲಿ ಮೊದಲ ಸುತ್ತಿನ ಚರ್ಚೆಗಳು ಈಗಾಗಲೇ ನಡೆದಿವೆ. ಇದು ಕೇವಲ ಊಹಾಪೋಹವಲ್ಲ. ಕರೆನ್ಸಿ ನೋಟುಗಳಿಂದ ಗಾಂಧಿಯವರನ್ನು ತೆಗೆದುಹಾಕುವುದು ದೇಶದ ಚಿಹ್ನೆಗಳನ್ನು ಮರುರೂಪಿಸುವ ದೊಡ್ಡ ಪ್ರಯತ್ನದ ಭಾಗವಾಗಿದೆ ಎಂದು ಬ್ರಿಟ್ಟಾಸ್ ಹೇಳಿದರು.
ಮೂಲಗಳ ಪ್ರಕಾರ, ಕೇಂದ್ರ ಸರಕಾರವು ಗಾಂಧಿಯವರ ಚಿತ್ರವನ್ನು ‘ಭಾರತದ ಸಂಸ್ಕೃತಿಯನ್ನು ಉತ್ತಮವಾಗಿ ಪ್ರತಿಫಲಿಸುತ್ತದೆ’ ಎಂದು ತಾನು ನಂಬಿರುವ ಪರ್ಯಾಯ ಚಿಹ್ನೆಯೊಂದಿಗೆ ಬದಲಿಸುವುದನ್ನು ಪರಿಗಣಿಸಬಹುದು ಮತ್ತು ಚರ್ಚಿಸಲಾದ ಪರ್ಯಾಯಗಳಲ್ಲಿ ‘ಭಾರತ ಮಾತೆ’ ಸೇರಿದೆ.
ಆದರೆ, ಕೇಂದ್ರದೊಂದಿಗೆ ಸಮಾಲೋಚಿಸಿದ ಬಳಿಕ ಆರ್ಬಿಐ ಕರೆನ್ಸಿ ನೋಟುಗಳ ವಿನ್ಯಾಸವನ್ನು ನಿರ್ಧರಿಸುತ್ತದೆ ಎಂದು ಸರಕಾರಿ ಮೂಲಗಳು ಸಮರ್ಥಿಸಿಕೊಂಡಿವೆ. 1996ರಲ್ಲಿ ಮಹಾತ್ಮಾ ಗಾಂಧಿ ಸರಣಿಯ ನೋಟುಗಳನ್ನು ಚಲಾವಣೆಗೆ ತಂದ ಬಳಿಕ ಎಲ್ಲ ಮುಖಬೆಲೆಗಳ ನೋಟುಗಳಲ್ಲಿ ಮಹಾತ್ಮಾ ಗಾಂಧಿಯವರ ಚಿತ್ರವು ಕಾಯಂ ವೈಶಿಷ್ಟ್ಯವಾಗಿದೆ.
2022ರಲ್ಲಿ ಆರ್ಬಿಐ ನೋಟುಗಳಿಂದ ಗಾಂಧಿಯವರ ಚಿತ್ರವನ್ನು ತೆಗೆದುಹಾಕಲಾಗುತ್ತದೆ ಎಂಬ ಮಾಧ್ಯಮ ವರದಿಗಳನ್ನು ಅಧಿಕೃತ ಹೇಳಿಕೆಯಲ್ಲಿ ಸ್ವಷ್ಟವಾಗಿ ನಿರಾಕರಿಸಿತ್ತು. ಕೆಲವು ಮುಖಬೆಲೆಗಳ ನೋಟುಗಳಲ್ಲಿ ರವೀಂದ್ರನಾಥ ಟಾಗೋರ್ ಮತ್ತು ಎಪಿಜೆ ಅಬ್ದುಲ್ ಕಲಾಂ ಅವರಂತಹ ಗಣ್ಯವ್ಯಕ್ತಿಗಳ ಚಿತ್ರಗಳನ್ನು ಮುದ್ರಿಸುವುದನ್ನು ವಿತ್ತ ಸಚಿವಾಲಯವು ಪರಿಶೀಲಿಸುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಈ ಸ್ಪಷ್ಟನೆ ಹೊರಬಿದ್ದಿತ್ತು.
ಸರಕಾರವು ಪ್ರತಿಪಕ್ಷಗಳ ವಿರೋಧದ ನಡುವ ನರೇಗಾ ಕಾಯ್ದೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟು ಹಲವು ಮಹತ್ವದ ಬದಲಾವಣೆಗಳೊಂದಿಗೆ VB G RAM G ಮಸೂದೆಯನ್ನು ತಂದ ಬಳಿಕ ಈ ವಿಷಯವು ಮತ್ತೆ ಮುನ್ನೆಲೆಗೆ ಬಂದಿದೆ.







