ಖ್ಯಾತ ಅರ್ಥಶಾಸ್ತ್ರಜ್ಞ ಕುಂಞಾಮನ್ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಎಂ. ಕುಂಞಾಮನ್ | Photo: indianexpress.com
ತಿರುವನಂತಪುರ: ಖ್ಯಾತ ಅರ್ಥಶಾಸ್ತ್ರಜ್ಞ ಎಂ. ಕುಂಞಾಮನ್ ಅವರು ತಿರುವನಂತಪುರದ ಸ್ರೀಕಾರ್ಯಂನಲ್ಲಿರುವ ತನ್ನ ನಿವಾಸದಲ್ಲಿ ರವಿವಾರ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇಂದು ಅವರ 74ನೇ ಜನ್ಮ ದಿನ.
ಅವರ ನಿವಾಸದಲ್ಲಿ ಸುಸೈಡ್ ನೋಟ್ ಪತ್ತೆಯಾಗಿದೆ. ಅದರಲ್ಲಿ, ‘‘ನಾನು ಈ ಲೋಕವನ್ನು ತ್ಯಜಿಸುತ್ತಿದ್ದೇನೆ. ನನ್ನ ಸಾವಿಗೆ ಯಾರು ಕೂಡ ಕಾರಣರಲ್ಲ’’ ಎಂದು ಬರೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುಸೈಡ್ ನೋಟ್ನಲ್ಲಿ 2023 ಡಿಸೆಂಬರ್ 2 ದಿನಾಂಕ ನಮೂದಿಸಲಾಗಿದೆ ಎಂದು ಮಲಯಾಳಂ ಮನೋರಮಾ ದಿನಪತ್ರಿಕೆ ವರದಿ ಮಾಡಿದೆ.
ಅವರು ರವಿವಾರ ಮನೆಗೆ ಆಗಮಿಸುವಂತೆ ಗೆಳೆಯರಿಗೆ ಆಹ್ವಾನ ನೀಡಿದ್ದರು. ಆದರೆ, ಗೆಳೆಯರು ಅವರನ್ನು ಫೋನ್ ಮೂಲಕ ಸಂಪರ್ಕಿಸಲು ಪ್ರಯತ್ನಿಸದಾಗ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಅನಂತರ ಅವರು ಮನೆಯ ಒಳಗೆ ನಿಶ್ಚಲವಾದ ಸ್ಥಿತಿಯಲ್ಲಿ ಪತ್ತೆಯಾದರು. ಮನೆಯಲ್ಲಿ ಕುಂಞಾಮನ್ ಅವರು ಒಬ್ಬರೇ ಇದ್ದರು. ಅವರ ಪತ್ನಿ ವೈದ್ಯಕೀಯ ಚಿಕಿತ್ಸೆಗೆ ಮಲಪ್ಪುರಂಗೆ ತೆರಳಿದ್ದರು.
ಕುಂಞಾಮನ್ ಅವರ ಆತ್ಮಚರಿತ್ರೆ ‘ಎತಿರು’ ದಲಿತ ಹುಡುಗನೋರ್ವ ತಾರತಮ್ಯವನ್ನು ಎದುರಿಸಿ ಹೋರಾಡಿ ಜೀವನದಲ್ಲಿ ಯಶಸ್ಸು ಪಡೆದಿರುವುದನ್ನು ವಿವರಿಸುತ್ತದೆ. ಈ ಕೃತಿ ಕುರಿತು ವ್ಯಾಪಕ ಪ್ರಶಂಸೆ ವ್ಯಕ್ತವಾಗಿತ್ತು. ಇವರನ್ನು ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಅರಸಿ ಬಂದಿತ್ತು. ಆದರೆ ಅವರು ಇದನ್ನು ನಿರಾಕರಿಸಿದ್ದರು.







