ಖ್ಯಾತ ಧಾರ್ಮಿಕ ವಿದ್ವಾಂಸ ಮೌಲಾನಾ ಮುಹಮ್ಮದ್ ಫಾರೂಕ್ ಖಾನ್ ನಿಧನ
ಮೌಲಾನಾ ಮುಹಮ್ಮದ್ ಫಾರೂಕ್ ಖಾನ್
ಲಕ್ನೋ, ಜೂ.28 : ಪ್ರಸಿದ್ಧ ಧಾರ್ಮಿಕ ವಿದ್ವಾಂಸ, ಹಿರಿಯ ಲೇಖಕ ಹಾಗು ಜಮಾಅತೆ ಇಸ್ಲಾಮಿ ಹಿಂದ್ ನ ಹಿರಿಯ ಸದಸ್ಯ ಮೌಲಾನಾ ಮುಹಮ್ಮದ್ ಫಾರೂಕ್ ಖಾನ್ ಬುಧವಾರ ನಿಧನರಾಗಿದ್ದಾರೆ. ಮೌಲಾನಾ ಅವರು ಇಂದು ಬೆಳಿಗ್ಗೆ ಬಕ್ರೀದ್ ಆಚರಿಸಲೆಂದು ಲಕ್ನೋದಲ್ಲಿರುವ ತಮ್ಮ ಮಗನ ಬಳಿಗೆ ಹೋಗಿದ್ದರು.
ಅವರು ಉರ್ದು ಮತ್ತು ಹಿಂದಿ ಭಾಷೆಗಳಲ್ಲಿ ಪವಿತ್ರ ಕುರಾನ್ ಅನುವಾದಕ ಮತ್ತು ವ್ಯಾಖ್ಯಾನಕಾರರಾಗಿದ್ದರು. ಉರ್ದು ಮತ್ತು ಹಿಂದಿ ಭಾಷೆಯಲ್ಲಿ ಏಳು ಸಂಪುಟಗಳಿರುವ ಕಲಾಂ ನವಾಬ್ ಎಂಬ ಮೇರು ಕೃತಿಯನ್ನು ರಚಿಸಿದ್ದಾರೆ.
ಮೌಲಾನಾ ಮುಹಮ್ಮದ್ ಫಾರೂಕ್ ಖಾನ್, ಪ್ರಖ್ಯಾತ ಇಸ್ಲಾಮಿಕ್ ವಿದ್ವಾಂಸ, ಕವಿ ಮತ್ತು ಬರಹಗಾರ. 1932 ರಲ್ಲಿ ಉತ್ತರ ಪ್ರದೇಶದ ಸುಲ್ತಾನ್ಪುರದ ಕರ್ಪಿ ಗ್ರಾಮದಲ್ಲಿ ಜನಿಸಿದರು. ಅವರು ಹಿಂದಿ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಅವರು ಅಜಂಗಢದಲ್ಲಿ ತಮ್ಮ ಬೋಧನಾ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಂತರ ಅವರು ಬರವಣಿಗೆ ಶುರು ಮಾಡಿದರು. ಪವಿತ್ರ ಕುರಾನ್ ನ ಹಿಂದಿ ಭಾಷೆಯ ಅನುವಾದ ಅವರ ಮೊದಲ ಕೃತಿ . ಅವರ ನಾಲ್ಕು ಸಂಪುಟಗಳ ಕಲಾಮೆ ನಬುವತ್ ಎಂಬ ಹದೀಸ್ (ಪ್ರವಾದಿ ಮುಹಮ್ಮದ್ ಅವರ ಆಚರಣೆಗಳು) ವ್ಯಾಖ್ಯಾನ ಸಂಕಲನವು ವ್ಯಾಪಕ ಮೆಚ್ಚುಗೆ ಪಡೆದಿದೆ.
ಇದಲ್ಲದೇ ದಾವಾ, ಮಾರ್ಗದರ್ಶನ, ವ್ಯಕ್ತಿತ್ವ ವಿಕಸನ ಮತ್ತು ಧರ್ಮಗಳ ತುಲನಾತ್ಮಕ ಅಧ್ಯಯನದಂತಹ ಹಲವಾರು ವಿಷಯಗಳ ಕುರಿತಾದ ಹಲವಾರು ಮಹತ್ವದ ಪುಸ್ತಕಗಳನ್ನು ಅವರು ಬರೆದಿದ್ದಾರೆ. ಅವರು ಹಿಂದಿ ಮತ್ತು ಉರ್ದು ಭಾಷೆಗಳಲ್ಲಿ ಇಸ್ಲಾಮೀ ಸಾಹಿತ್ಯದ ಹಲವು ಪ್ರಮುಖ ಗ್ರಂಥಗಳನ್ನು ರಚಿಸಿದ ಹೆಗ್ಗಳಿಕೆ ಅವರದ್ದು . ಅರೇಬಿಕ್ ಮತ್ತು ಉರ್ದುವಿನಿಂದ ಅನೇಕ ಪುಸ್ತಕಗಳನ್ನು ಹಿಂದಿಗೆ ಅನುವಾದಿಸಿದ್ದಾರೆ. ಅವರ ಕವನ ಸಂಕಲನಗಳೂ ಉರ್ದು ಮತ್ತು ಹಿಂದಿಯಲ್ಲಿ ಪ್ರಕಟವಾಗಿವೆ. ಅವರು ಈ ಹಿಂದೆ ಜಮಾಅತೆ ಇಸ್ಲಾಮಿ ಹಿಂದ್ ನ ಕೇಂದ್ರ ಪ್ರತಿನಿಧಿಗಳ ಸಭೆಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.