ತನ್ನ ವಿರುದ್ಧ ಹಕ್ಕುಚ್ಯುತಿ ಮಂಡನೆ ಸಾಧ್ಯತೆಯ ವರದಿಗೆ ಬೌ...ಬೌ... ಎಂದು ಪ್ರತಿಕ್ರಿಯಿಸಿದ ರೇಣುಕಾ!

ರೇಣುಕಾ ಚೌದುರಿ | Photo Credit : ANI \ PTI
ಹೊಸದಿಲ್ಲಿ,ಡಿ.3: ಸಂಸತ್ ಭವನದೊಳಗೆ ನಾಯಿಯನ್ನು ತನ್ನೊಂದಿಗೆ ತಂದಿದ್ದಕ್ಕಾಗಿ ಕಾಂಗ್ರೆಸ್ ಪಕ್ಷದ ರಾಜ್ಯಸಭಾ ಸಂಸದೆ ರೇಣುಕಾ ಚೌದುರಿ ವಿರುದ್ಧ ಆಡಳಿತ ಪಕ್ಷದ ಸದಸ್ಯರು ಹಕ್ಕುಚ್ಯುತಿ ಮಂಡಿಸಲು ಬಯಸಿದ್ದಾರೆಂಬ ವರದಿಗಳಿಗೆ ರೇಣುಕಾಚೌಧುರಿ ಅವರು ‘‘ಬೌ ಬೌ!’’ ಎಂದು ಥಟ್ಟನೆ ಉತ್ತರಿಸಿದ್ದಾರೆ.
ರಾಜ್ಯಸಭಾ ಸಂಸದೆಯ ಈ ವ್ಯಂಗ್ಯೋಕ್ತಿಯು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಅಣಕಿಸಲಾಗುತ್ತಿದೆ. ಬಹಾಮಾದ ಜನಪ್ರಿಯ ಗಾಯನ ತಂಡ ಬಹಾ ಮೆನ್ ನ ಜನಪ್ರಿಯ ಹಾಡು ಹೂ ಲೆಟ್ ಡಾಗ್ಸ್ ಔಟ್ ನೊಂದಿಗೆ ರೇಣುಕಾ ಅವರು ಉಚ್ಚರಿಸಿರುವ‘‘ಬೌಬೌ’’ ಪದಗಳನ್ನು ಸಮ್ಮಿಳಿತಗೊಳಿಸಿದ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
‘‘‘‘ ಬೌ ಬೌ... ನಾನು ಏನು ತಾನೇ ಹೇಳಿಯೇನು.. ಅದರಲ್ಲಿ ತಪ್ಪೇನಿದೆ. ಅಗತ್ಯ ಬಿದ್ದಾಗ ನಾನು ಸೂಕ್ತ ಉತ್ತರವನ್ನು ನೀಡುವೆ’’ ಎಂದು ರೇಣುಕಾ ಹೇಳಿದ್ದರು.
ನಿರ್ಭಿಡೆಯ ಮಾತುಗಳಿಗೆ ಹೆಸರಾದ ರಾಜ್ಯಸಭಾ ಸಂಸದೆ ರೇಣುಕಾ ಚೌಧುರಿ ಅವರು ಚಳಿಗಾಲದ ಅಧಿವೇಶನದ ಮೊದಲ ದಿನವಾದ ಸೋಮವಾರ ಸಂಸತ್ ಭವನಕ್ಕೆ ನಾಯಿಯನ್ನು ತರುವ ಮೂಲಕ ವಿವಾದದ ಕೇಂದ್ರ ಬಿಂದುವಾಗಿದ್ದರು. ತಾನು ವಾಹನ ಅಪಘಾತದಲ್ಲಿ ಸಿಲುಕಿದ ಬೀದಿನಾಯಿಯೊಂದನ್ನು ರಕ್ಷಿಸಿದ್ದು, ಅದನ್ನು ಪಶುಚಿಕಿತ್ಸಾಲಯಕ್ಕೆ ಕೊಂಡೊಯ್ಯುತ್ತಿರುವುದಾಗಿ ಹೇಳಿದ್ದರು.
ನಾಯಿಯನ್ನು ಯಾಕೆ ಸದನದೊಳಗೆ ತಂದಿದ್ದೀರೆಂದು ರೇಣುಕಾ ಅವರನ್ನು ಪತ್ರಕರ್ತರು ಪ್ರಶ್ನಿಸಿದಾಗ‘‘ಸದನದೊಳಗೆ ಕುಳಿತಿರುವವರು ಕಚ್ಚಬಲ್ಲರು.. ಆದರೆ ನಾಯಿಗಳು ಹಾಗೆ ಕಚ್ಚಲ್ಲ’’ ಎಂದು ರೇಣುಕಾ ಹೇಳಿದ್ದರು.
ರೇಣುಕಾ ಅವರ ಈ ನಡವಳಿಕೆಗೆ ಬಿಜೆಪಿ ಸದಸ್ಯರಿಂದ ವ್ಯಾಪಕ ವಿರೋಧವ್ಯಕ್ತವಾಗಿತ್ತು ಮತ್ತು ಆಕೆಯ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು.







