ಐಪಿಸಿ ಸೆಕ್ಷನ್ 377 ರದ್ದು: ಹೊಸ ಕಾನೂನಿನಲ್ಲಿ ಲೈಂಗಿಕ ದೌರ್ಜನ್ಯದ ವಿರುದ್ಧ ಪುರುಷರಿಗೆ ರಕ್ಷಣೆ ಇಲ್ಲ!

ಸಾಂದರ್ಭಿಕ ಚಿತ್ರ.
ಹೊಸದಿಲ್ಲಿ: ಭಾರತದಲ್ಲಿನ ಅಪರಾಧಗಳ ವ್ಯಾಖ್ಯಾನ ಮಾಡುವ ಹಾಗೂ ಶಿಕ್ಷೆಯನ್ನು ವಿಧಿಸುವ ಭಾರತೀಯ ದಂಡ ಸಂಹಿತೆಯ ಸಮಗ್ರ ಸುಧಾರಣೆಗಾಗಿ ಶುಕ್ರವಾರ ಕೇಂದ್ರ ಸರ್ಕಾರವು ಲೋಕಸಭೆಯಲ್ಲಿ ಹೊಸ ಮಸೂದೆಯನ್ನು ಮಂಡಿಸಿದ್ದು, ಹಾಲಿ ಜಾರಿಯಲ್ಲಿರುವ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 377 ಅನ್ನು ಕೈಬಿಡುವ ಪ್ರಸ್ತಾವ ಹೊಂದಿದೆ ಎಂದು indiatoday.in ವರದಿ ಮಾಡಿದೆ.
ಈ ಮಸೂದೆ ಅಂಗೀಕಾರವಾದರೆ, ಪುರುಷರ ವಿರುದ್ಧ ನಡೆಯುವ ಅನೈಸರ್ಗಿಕ ಲೈಂಗಿಕ ದೌರ್ಜನ್ಯಗಳಿಗೆ ಯಾವುದೇ ಶಿಕ್ಷೆ ಇರುವುದಿಲ್ಲ. ಪ್ರಸ್ತಾವಿತ ಮಸೂದೆಯು ಅತ್ಯಾಚಾರವನ್ನು ಮಹಿಳೆ ಅಥವಾ ಮಗುವಿನ ವಿರುದ್ಧ ನಡೆಯುವ ಪುರುಷನ ಲೈಂಗಿಕ ಅಪರಾಧ ಕೃತ್ಯವೆಂದು ವ್ಯಾಖ್ಯಾನಿಸಿದೆ. ಸದ್ಯ, ಪುರುಷರ ವಿರುದ್ಧದ ಲೈಂಗಿಕ ಅಪರಾಧಗಳನ್ನು ಸೆಕ್ಷನ್ 377ರ ಅಡಿ ಸೇರ್ಪಡೆ ಮಾಡಲಾಗಿದೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 377ರ ಪ್ರಕಾರ, “ಯಾರಾದರೂ ನೈಸರ್ಗಿಕ ನಿಯಮಕ್ಕೆ ವಿರುದ್ಧವಾಗಿ ಯಾವುದೇ ಪುರುಷ, ಮಹಿಳೆ ಅಥವಾ ಪ್ರಾಣಿಯೊಂದಿಗೆ ಸಂಭೋಗ ನಡೆಸಿದರೆ, ಅಂತಹ ವ್ಯಕ್ತಿಗಳಿಗೆ ಜೀವಾವಧಿ ಶಿಕ್ಷೆ ಅಥವಾ ಹತ್ತು ವರ್ಷಗಳ ಅವಧಿವರೆಗಿನ ಎರಡೂ ಬಗೆಯ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಬಹುದಾಗಿದೆ” ಎಂದು ಹೇಳುತ್ತದೆ.
2018ರ ಆರಂಭದಲ್ಲಿ ಭಾರತ ದಂಡ ಸಂಹಿತೆಯ ಸೆಕ್ಷನ್ 377 ಅನ್ನು ತಳ್ಳಿ ಹಾಕಿದ್ದ ಸುಪ್ರೀಂ ಕೋರ್ಟ್ ತೀರ್ಪೊಂದು, ಸಲಿಂಗಕಾಮಿಗಳ ನಡುವಿನ ಲೈಂಗಿಕ ಸಂಬಂಧವನ್ನು ಅಪರಾಧಮುಕ್ತಗೊಳಿಸುವ ಭಾಗವಾಗಿ ಒಪ್ಪಿಗೆಯಿರುವ ವಯಸ್ಕರು ನಡೆಸುವ ಲೈಂಗಿಕ ಕ್ರಿಯೆಯನ್ನು ಅಪರಾಧ ಕೃತ್ಯ ಎಂದು ಪರಿಗಣಿಸಲು ಬರುವುದಿಲ್ಲ ಎಂದು ಹೇಳಿತ್ತು.
“ಒಪ್ಪಿತ ಅನೈಸರ್ಗಿಕ ಲೈಂಗಿಕ ಕ್ರಿಯೆಯನ್ನು ಅಪರಾಧೀಕರಣಗೊಳಿಸುವುದು ಅತಾರ್ಕಿಕ, ಅಸಮರ್ಥನೀಯ ಹಾಗೂ ಸ್ಪಷ್ಟವಾಗಿ ನಿರಂಕುಶ. ಇದು ಸಮಾನತೆಯ ಹಕ್ಕನ್ನು ಭಾಗಶಃ ಕಸಿಯುವ ಮೂಲಕ ಉಲ್ಲಂಘಿಸುತ್ತದೆ” ಎಂದು ಸೆಪ್ಟೆಂಬರ್ 6, 2018ರಂದು ಸುಪ್ರೀಂಕೋರ್ಟ್ ನ ಐದು ಮಂದಿ ನ್ಯಾಯಾಧೀಶರ ನ್ಯಾಯ ಪೀಠವು ತೀರ್ಪು ನೀಡಿತ್ತು.
ಆದರೆ, ಪ್ರಾಣಿಗಳು ಹಾಗೂ ಮಕ್ಕಳೊಂದಿಗೆ ನಡೆಸುವ ಬಲವಂತದ ಅನೈಸರ್ಗಿಕ ಲೈಂಗಿಕ ಕೃತ್ಯವನ್ನು ಅಪರಾಧವೆಂದು ಪರಿಗಣಿಸುವ ಸೆಕ್ಷನ್ 377ರ ಭಾಗವು ಚಾಲ್ತಿಯಲ್ಲಿರಲಿದೆ ಎಂದೂ ಸುಪ್ರೀಂ ಕೋರ್ಟ್ ಹೇಳಿತ್ತು.







