2022ರಲ್ಲಿ 11 ಲಕ್ಷ ಮಕ್ಕಳು ದಡಾರ ಲಸಿಕೆ ವಂಚಿತ ಎಂಬ ವರದಿಯಲ್ಲಿ ಹುರುಳಿಲ್ಲ: ಕೇಂದ್ರ

ಸಾಂದರ್ಭಿಕ ಚಿತ್ರ | Photo: PTI
ಹೊಸದಿಲ್ಲಿ: ಕಳೆದ ವರ್ಷ ಸುಮಾರು 11 ಲಕ್ಷ ಮಕ್ಕಳು ಚೊಚ್ಚಲ ದಢಾರ ಲಸಿಕೆ ಡೋಸ್ನಿಂದ ವಂಚಿತರಾಗಿದ್ದಾರೆಂಬ ಮಾಧ್ಯಮಗಳ ವರದಿಯು ತಪ್ಪು ಮಾಹಿತಿಯಿಂದ ಕೂಡಿದೆ ಹಾಗೂ ನಿಖರವಾದುದಲ್ಲವೆಂದು ಕೇಂದ್ರ ಕುಟುಂಬ ಆರೋಗ್ಯ ಕಲ್ಯಾಣ ಇಲಾಖೆ ಶನಿವಾರ ತಿಳಿಸಿದೆ.
2022ರಲ್ಲಿ ಅಂದಾಜು 11 ಲಕ್ಷ ಮಕ್ಕಳು ತಮ್ಮ ಚೊಚ್ಚಲ ದಡಾರ ಲಸಿಕೆಯನ್ನು ಪಡೆದಿಲ್ಲವೆಂದು ಕೆಲವು ಮಾಧ್ಯಮಗಳು ಆರೋಪಿಸಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಓ) ಹಾಗೂ ರೋಗನಿಯಂತ್ರಣ ಹಾಗೂ ತಡೆಗಾಗಿನ ಅಮೆರಿಕ ಕೇಂದ್ರ (ಸಿಡಿಸಿ)ದ ಪ್ರಕಟಣೆ ತಿಳಿಸಿದೆ.
ಈ ವರದಿಗಳು ಸತ್ಯಾಂಶಗಳನ್ನು ಆಧರಿಸಿಲ್ಲ ಹಾಗೂ ಅವು ನೈಜ ಚಿತ್ರವನ್ನು ಪ್ರತಿಬಿಂಬಿಸುವುದಿಲ್ಲವೆಂದು ಕೇಂದ್ರ ಕುಟುಂಬ ಆರೋಗ್ಯ ಕಲ್ಯಾಣ ಇಲಾಖೆಯ ಹೇಳಿಕೆ ತಿಳಿಸಿದೆ.
ಡಬ್ಲ್ಯುಎಚ್ಓ, ಯುನಿಸೆಫ್ ರಾಷ್ಟ್ರೀಯ ರೋಗನಿರೋಧಕ ರಕ್ಷಣೆ (ಡಬ್ಲ್ಯುಯುಇಎನ್ಐಸಿ) 2022ರ ವರದಿಗಳನ್ನು ಇವು ಆಧರಿಸಿದ್ದು, 2022ರ ಜನವರಿ 1ರಿಂದ 2022ರ ಡಿಸೆಂಬರ್31ರ ಕಾಲಮಿತಿಯೊಳಗೆ ಸಿದ್ಧಪಡಿಸಲಾದ ವರದಿ ಇದಾಗಿದೆ. ಕೇಂದ್ರ ಆರೋಗ್ಯ ಸಚಿವಾಯದ ಆರೋಗ್ಯ ನಿರ್ವಹಣಾ ಮಾಹಿತಿ ವ್ಯವಸ್ಥೆಯ ಪ್ರಕಾರ 2022-23ರ ಸಾಲಿನಲ್ಲಿ ಅರ್ಹ 2,63,84,580 ಮಕ್ಕಳ ಪೈಕಿ 2,63,63,270 ಮಕ್ಕಳು, ದಢಾರ ತಡೆ ಲಸಿಕೆ (ಎಂಸಿವಿ)ಯನ್ನು 2022-23ರ ವಿತ್ತೀಯ ವರ್ಷದಲ್ಲಿ ಪಡೆದುಕೊಂಡಿದ್ದರು ಎಂದು ಸಚಿವಾಲಯವು ಹೇಳಿಕೆಯೊಂದರಲ್ಲಿ ತಿಳಿಸಿದೆ.
ಇದರ ಜೊತೆಗೆ ಲಸಿಕೆ ಪಡೆಯದೇ ಇರುವ ಅಥವಾ ಭಾಗಶಃ ಲಸಿಕೆ ಪಡೆದ ಎಲ್ಲಾ ಮಕ್ಕಳಿಗೆ, ಎಂಸಿವಿ ಲಸಿಕೆ ದೊರೆಯುವುದನ್ನು ಖಾತರಿಪಡಿಸಲು ರಾಜ್ಯಗಳ ಸಮನ್ವಯದೊಂದಿಗೆ ಕೇಂದ್ರ ಸರಕಾರವು ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ ಎಂದು ಮೂಲಗಳು ತಿಳಿಸಿದೆ.
ಆಡಳಿತದಿಂದದ ಎಂಸಿವಿ ಲಸಿಕೆಯನ್ನು ಪಡೆಯುವ ಮಕ್ಕಳ ವಯೋಮಿತಿಯನ್ನು ಎರಡು ವರ್ಷಗಳಿಂದ ಐದು ವರ್ಷಗಳಿಗೆ ವಿಸ್ತರಿಸಲಾಗಿದೆ.
ಎಂಸಿವಿ ಲಸಿಕೆ ಪಡೆದಿರದ ಅಥವಾ ಲಸಿಕೆಯನ್ನು ಭಾಗಶಃವಾಗಿ ಪಡೆದಿರುವ ಎಲ್ಲಾ ಮಕ್ಕಳ ಪೂರ್ಣ ಪ್ರಮಾಣ ಲಸಿಕೀಕರಣಕ್ಕಾಗಿ 2021 ಹಾಗೂ 2022ರಲ್ಲಿ ಇಂಟೆನ್ಸಿಫೈಡ್ ಮಿಶನ್ ಇಂದ್ರಧನುಶ್ (ಐಎಂಐ) 3.0 ಹಾಗೂ 4.0 ಅನ್ನು ಕೈಗೊಳ್ಳಲಾಗಿದೆ.
ಇದರ ಜೊತೆಗೆ 2023ರಲ್ಲಿ ಐಎಂಐ 5.0 ಅನ್ನು ನಡೆಸಲಾಗಿದ್ದು, ಎಂಆರ್ವಿ ಲಸಿಕೆಯ ರಕ್ಷಣೆಗೆ ಒಳಪಡುವ ಮಕ್ಕಳ ವಯೋಮಿತಿಯನ್ನು ಐದು ವರ್ಷಗಳಿಗೆ ಹೆಚ್ಚಿಸಲಾಗಿದೆ.
ಎಂಆರ್ ಲಸಿಕೆ ನೀಡಿಕೆ ಅಭಿಯಾನದ ಮೂಲಕ ದಿಲ್ಲಿ ಹಾಗೂ ಪಶ್ಚಿಮ ಬಂಗಾಳಗಳಲ್ಲಿ 9 ತಿಂಗಳಶಿಶುವಿನಿಂದ ಹಿಡಿದು 15 ವರ್ಷಗಳ ಎಲ್ಲಾ ಮಕ್ಕಳಿಗೆ ದಡಾರ ಲಸಿಕೆ ನೀಡಿಕೆ ಅಭಿಯಾನ ನಡೆಸಲಾಗಿದೆ. ಇದರ ಜೊತೆಗೆ ಕೆಲವು ರಾಜ್ಯಗಳು ಕೂಡಾ ಪೂರಕ ರೋಗನಿರೋಧಕ ಚಟುವಟಿಕೆಗಳನ್ನು ಹಮ್ಮಿಕೊಂಡಿವೆ. ಅಲ್ಲದೆ ಎಂಆರ್ಎ ಲಸಿಕೆಯ ಹೆಚ್ಚುವರಿ ಡೋಸ್ನೊಂದಿಗೆ 3 ಕೋಟಿಗೂ ಅಧಿಕ ಮಕ್ಕಳಿಗೆ ಲಸಿಕೆಯನ್ನು ನೀಡಲಾಗಿದೆ ಎಂದು ಕೇಂದ್ರ ಕುಟುಂಬ ಆರೋಗ್ಯ ಕಲ್ಯಾಣ ಇಲಾಖೆಯ ಹೇಳಿಕೆ ತಿಳಿಸಿದೆ.







